ಉಬುಂಟು ಮ್ಯಾನುಅಲ್ – ೧೦.೦೪

ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ?

ಹಾ! ನಿಮಗಾಗಿಯೇ ಇಲ್ಲಿದೆ ನೋಡಿ ಉಬುಂಟು ೧೦.೦೪ ಮ್ಯಾನುಅಲ್. ಕ್ರಿಯೇಟೀವ್ ಕಾಮನ್ಸ್ ಲೈಸನ್ಸ್ ನಡಿಯಲ್ಲಿ ಉಚಿತವಾಗಿ ದೊರೆಯುವ ಈ ಕೈಪಿಡಿ ನಿಮಗೆ ಉಬುಂಟು ಉಪಯೋಗಿಸುವುದರ ಬಗ್ಗೆ ಅನೇಕ ಮಾಹಿತಿಗಳನ್ನು ಹೊತ್ತು ತಂದಿದೆ. ಸಂಗೀತ ಕೇಳುವುದು, ಕಡತಗಳ ವಿಲೇವಾರಿ ಇತ್ಯಾದಿ ದಿನನಿತ್ಯದ ಕೆಲಸಗಳನ್ನು ಉಬುಂಟುವಿನಲ್ಲಿ ಮಾಡೋದು ಹೇಗೆ ಅನ್ನೋದನ್ನು ಇದು ತಿಳಿಸಿಕೊಡುತ್ತದೆ.

http://ubuntu-manual.org/ ನಿಂದ ಈ ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು, ಉಪಯೋಗಿಸಿಕೊಳ್ಳಬಹುದು


googlecl – ಗೂಗಲ್ ಕಮ್ಯಾಂಡ್ ಲೈನ್

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ.

ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ, ಯೂಟ್ಯೂಬ್ ಇತ್ಯಾದಿ ಸೇವೆಗಳನ್ನು ಇನ್ಮುಂದೆ ಸುಲಭವಾಗಿ ಗೂಗಲ್ ಸಿ.ಎಲ್ (Google Command Line or GoogleCL) ಬಳಸಿ ನಿಮ್ಮ ಕನ್ಸೋಲ್ ಮೂಲಕ ಉಪಯೋಗಿಸಿಕೊಳ್ಳಬಹುದು.

ಗೂಗಲ್ ಸಿ.ಎಲ್ ನಿಮಗೆ ಈ ಕೆಳಕಂಡ ಕೊಂಡಿಯಲ್ಲಿ ಸಿಗುತ್ತದೆ.

http://code.google.com/p/googlecl/

ಉಬುಂಟು, ಡೆಬಿಯನ್ ಬಳಸುವವರು ಇಲ್ಲಿ ಸಿಗುವ .deb ಫೈಲ್ ಡೌನ್ ಲೋಡ್ ಮಾಡಿಕೊಂಡು ಸುಲಭವಾಗಿ ಇಸ್ಟಾಲ್ ಮಾಡಿಕೊಳ್ಳಬಹುದು.

ಕೆಳಕಂಡ ಪಟ್ಟಿ ಗೂಗಲ್ ನ ಕೆಲ ಸೇವೆಗಳನ್ನು googlecl ಬಳಸಿ ಉಪಯೋಗಿಸುವುದಕ್ಕೆ ಉದಾಹರಣೆಗಳನ್ನು ನೀಡುತ್ತದೆ.

ಬ್ಲಾಗರ್
$ google blogger post --title "foo" "command line posting"

ಕ್ಯಾಲೆಂಡರ್
$ google calendar add "Lunch with Jim at noon tomorrow"

ಕಾಂಟ್ಯಾಕ್ಟ್ಸ್
$ google contacts list name,email > contacts.csv

ಗೂಗಲ್ ಡಾಕ್ಸ್
$ google docs edit --title "Shopping list"

ಪಿಕಾಸ
$ google picasa create --title "Cat Photos" ~/photos/cats/*.jpg

ಯೂಟ್ಯೂಬ್
$ google youtube post --category Education killer_robots.avi

ಹೆಚ್ಚಿನ ಮಾಹಿತಿ:-

ಗೂಗಲ್ ಸಿ.ಎಲ್ ಪೈಥಾನ್ ತಂತ್ರಾಂಶವಾಗಿದ್ದು, Python gdata ಲೈಬ್ರರಿಗಳನ್ನು ಗೂಗಲ್ ನ ಡೆಟಾ API (Application programming Interface) ಸಂದೇಶಗಳನ್ನು ಬಳಸುತ್ತದೆ.
ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಗೂಗಲ್ .ಸಿ.ಎಲ್  ನಿಮ್ಮ ಮುಂದಿಡುತ್ತಿದೆ.  ಏನಿದು ಕ್ಲೌಡ್ ಕಂಪ್ಯೂಟಿಂಗ್ … ? ಇದರ ಬಗ್ಗೆ ಹೆಚ್ಚಿನ ವಿವರಣೆ ಮುಂದಿನ ಲಿನಕ್ಸಾಯಣ ಕಂತುಗಳಲ್ಲಿ.


GRUB ಅಪ್ಚನ್ ಬದಲಿಸೋದು ಹ್ಯಾಗೆ?

ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡಿದ ನಂತರ ಲಿನಕ್ಸ್ ಬೂಟ್ ಲೋಡರ್ GRUB ನಲ್ಲಿ ಡೀಫಾಲ್ಟ್ (Default) ಆಯ್ಕೆಯಾಗಿ ಬಿಡತ್ತೆ. ಇದನ್ನ ಬದಲಿಸೋದ್ಯಾಗೆ ಅಂತ ಸಂಪದ ಸಂವಾದಲ್ಲಿ ನನ್ನ ಮುಂದಿಟ್ಟ ಪ್ರಶ್ನೆಗೆ ಹ್ಯಾಗೆ ಉತ್ತರಿಸೋದು ಅಂತ ಯೋಚಿಸ್ತಿದ್ದೆ. ಯಾಕಂದ್ರೆ ಇದಕ್ಕೆ GRUB ನ ಕಾನ್ಪಿಗರೇಷನ್ ಫೈಲ್ ಎಡಿಟ್ ಮಾಡಬೇಕು. ಒಂದು ಸಣ್ಣ ತಪ್ಪಾದರೂ ಕಂಪ್ಯೂಟರ್ ತಕ್ಷಣಕ್ಕೆ ಕೆಲಸ ಮಾಡದೇ ಹೋಗ ಬಹುದು.

ಆಗ ನನ್ನ ತಲೆಗೆ ಹೊಳೆದ ಉತ್ತರ, ಬಳಕೆದಾರನಿಗೆ ಮೌಸ್ ಉಪಯೋಗಿಸಿ GUI (ಗ್ರಾಫಿಕಲ್ ಯೂಸರ್ ಇಂಟರ್ಪೇಸ್) ನಲ್ಲೇ GRUB ಆಫ್ಛನ್ ಬದಲಿಸಬಹುದಾದ ಸಣ್ಣದೊಂದು ತಂತ್ರಾಂಶ. ಅದೇ “grub-choose-default“.

ಇದನ್ನು ನೀವು Synaptic Package Manager ಬಳಸಿ ಅಥವಾ ಕೆಳಗೆ ಕೊಟ್ಟಿರುವ ಕಮ್ಯಾಂಡ್ ಅನ್ನು ಟರ್ಮಿನಲ್ ನಲ್ಲಿ ಬಳಸಿ ನೀವಿದನ್ನ ಇನ್ಸ್ಟಾಲ್ ಮಾಡಿಕೊಳ್ಳಬಹುದು.

sudo aptitude install grub-choose-default

ಇನ್ಸ್ಟಾಲೇಷನ್ ಮುಗಿದ ನಂತರ Applications-> System Tools -> “Choose Next Default for Grub” ಮೆನುವಿನಿಂದ ನೀವು ತಂತ್ರಾಂಶವನ್ನ ತೆರೆಯ ಮೇಲೆ ತರಬಹುದಾಗಿದೆ.

ಕೆಳಗಿನ ಕಮ್ಯಾಂಡ್ ಕೂಡ ಅದೇ ಕೆಲಸ ಮಾಡುತ್ತೆ. (Alt+F2 ಪ್ರೆಸ್ ಮಾಡಿ ರನ್ ಪ್ರಾಂಟ್ ಬಂದಾಗ ಅಲ್ಲಿ ಕೆಳಗಿನ ಕಮ್ಯಾಂಡ್ ಬಳಸಿ ಇಲ್ಲ ಟರ್ಮಿನಲ್ ನಲ್ಲಿ ಇದನ್ನು ಬಳಸಬಹುದು)

sudo grub-choose-default

ತಂತ್ರಾಂಶ ನನ್ನ ಕಂಪ್ಯೂಟರಿನಲ್ಲಿ ಕಂಡಂತೆ:

ಇಲ್ಲಿ ನಾನು ಉಬುಂಟುವನ್ನು ನನ್ನ ಡೀಫಾಲ್ಟ್ ಆಯ್ಕೆ ಮಾಡಿಕೊಂಡಿದ್ದೇನೆ. ನಿಮಗೆ ವಿಂಡೋಸ್ ಬೇಕಿದ್ದರೆ ನೀವು ಅದನ್ನ ಕ್ಲಿಕ್ ಮಾಡಿದರಾಯಿತು.


ಲಿನಕ್ಸ್ ವಿಂಡೋಸ್‌ನಷ್ಟು ಬಳಕೆದಾರ ಸ್ನೇಹಿಯೇ?

ಹೌದು, ಅದಕ್ಕಿಂತಲೂ ಹೆಚ್ಚು.. ನೀವದನ್ನು ಬಳಸಿಯೇ ತಿಳಿಯಬೇಕು.


ವಿಂಡೋಸ್ ಮೀಡಿಯಾ ಹೇಗೆ ಪ್ಲೇ ಮಾಡೋದು?

ವಿಂಡೋಸ್ ನ WMA ಫಲ್ ಇತ್ಯಾದಿಗಳನ್ನ ಗ್ನು/ಲಿನಕ್ಸ್ ನಲ್ಲಿ ಲೈಸೆನ್ಸ್, ಪೇಟೆಂಟುಗಳ ಕಿರಿಕಿರಿಯಿಂದಾಗಿ ಪ್ಲೇ ಮಾಡ್ಲಿಕ್ಕಾಗಲ್ಲ. video/x-asf-unknown or MSS2 ಕೋಡೆಕ್ (Codec)ಗಳಿಲ್ಲ ಎಂಬ error ಮೆಸೇಜ್ ನಿಮಗೆ ಸಾಮಾನ್ಯವಾಗಿ ಕಾಣತ್ತೆ. ಅದಕ್ಕೆ ಉತ್ತರ ಅಂದ್ರೆ MPlayer ಬಳಸೋದು. ಇದು ಸುಲಭವಾಗಿ ಅನೇಕ ಬಗೆಯ ಮೀಡಿಯಾ ಫೈಲ್ಗಳನ್ನು ಪ್ಲೇ ಮಾಡುತ್ತ್ತೆ.

ಈಗಾಗಲೇ ಹಳೆಯ Mplayer ಇದ್ದು ಅದು ಕೆಲಸ ಮಾಡ್ತಿಲ್ಲ ಅಂದ್ರೆ [Mplayer] ವೆಬ್ ಸೈಟ್ ಗೆ ತೆರಳಿ, essentials ಕೋಡೆಕ್ ಡೌನ್ಲೋಡ್ ಮಾಡ್ಕೊಳ್ಳಿ. ನಂತರ ಅವನ್ನು /usr/lib/win32 ಗೆ ಕಾಪಿ ಮಾಡಿ ಮತ್ತೆ Mplayer ಶುರು ಮಾಡಿದರಾಯಿತು. ವಿಂಡೋಸ್ ಫೈಲ್ಗಳನ್ನು ಗ್ನು/ಲಿನಕ್ಸ್ ನಲ್ಲಿ ನೀವು ಪ್ಲೇ ಮಾಡ್ಲಿಕ್ಕೆ ಶುರುಮಾಡಬಹುದು.


ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು/ಲಿನಕ್ಸ್ ನಲ್ಲಿರಲಿ, ವಿಂಡೋಸ್ ನಲ್ಲಿ ಕೂಡ ಹೆಣಗಾಡಿದ್ದಿದೆ.

ಈಗ ಪ್ರಿಂಟರ್ಗಳನ್ನು ಉಪಯೋಗಿಸೋದು ತುಂಬಾ ಸುಲಭ. ಪ್ರಿಂಟರ್ ತಂದು, ಅದರ ಕೇಬಲ್ ಅನ್ನು ನಿಮ್ಮ ಕಂಪ್ಯೂಟರ್ ಗೆ ಜೋಡಿಸಿ, ಸ್ವಿಚ್ ಆನ್ ಮಾಡಿದರಾಯಿತು (ಗ್ನು/ಲಿನಕ್ಸ್ ನಲ್ಲಿ ;) ). ನಿಮಗೇ ತಿಳಿಯದಂತೆ, ನಿಮ್ಮ ಪ್ರಿಂಟರ್ ಕೆಲಸ ಮಾಡ್ಲಿಕ್ಕೆ ತಯಾರಾಗಿಬಿಟ್ಟಿರುತ್ತೆ.

ಕಳೆದ ವಾರ ಸಂಪದದ ತಿ-ಇನ್-ಒನ್ ಪ್ರಿಂಟರ್ ಬಂತು, ಕನೆಕ್ಟ್ ಮಾಡಿದ್ದಷ್ಟೇ, ಕ್ಷಣ ಮಾತ್ರದಲ್ಲಿ ಪ್ರಿಂಟರ್ ಪತ್ರಗಳನ್ನು ಪ್ರಿಂಟ್ ಮಾಡ್ಲಿಕ್ಕೆ ತಯಾರು. ಅದರಲ್ಲಿ ಸ್ಕ್ಯಾನ್ ಮಾಡ್ಲಿಕ್ಕೆxsane ತಂತ್ರಾಂಶ ಉಪಯೋಗಿಸ್ಬೇಕು. ಈಗಾಗ್ಲೇ ಇನ್ಸ್ಟಾಲ್ ಆಗಿದ್ದ ತಂತ್ರಾಂಶವನ್ನ ಓಪನ್ ಮಾಡಿ, ಪುಸ್ತಕವೊಂದರ ಮುಖಪುಟ ಕೂಡ ಸ್ಕ್ಯಾನ್ ಮಾಡಿದ್ದಾಯ್ತು. HP ಮತ್ತು Canon ಪ್ರಿಂಟರ್ಗಳು ತುಂಬಾ ಸುಲಭವಾಗಿ ಲಿನಕ್ಸ್ ನಲ್ಲಿ ಕೆಲಸ ಮಾಡ್ತವೆ. ಹಳೆಯ ಪ್ರಿಂಟರ್ಗಳನ್ನ ಎತ್ತಿಟ್ಟಿದ್ದರೆ, ಒಮ್ಮೆ ಲಿನಕ್ಸ್ ನಲ್ಲಿ ಉಪಯೋಗಿಸಿ ನೋಡಿ. ಕೆಲವೊಂದು ಕೆಲಸಗಳಿಗೆ ಅವು ಉಪಯೋಗಕ್ಕೆ ಬಂದಾವು.

1 Comment more...

ಹೈಬರ್ನೇಟ್

ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ.

ಕಂಪ್ಯೂಟರ್ ಕೆಲ್ಸ ಮಾಡ್ತಾನೇ ಇರತ್ತೆ, ನಾವು ಮಾತ್ರ ಅಲ್ಲಿ ಇಲ್ಲಿ ಓಡಾಡ್ಕೋತ ಅದನ್ನು ಮರತೇ ಹೋಗೋದುಂಟು. ಕೆಲವು ಸಲ ಇದು ಅನಿವಾರ್ಯವಾಗಿದ್ದರೂ ಮತ್ತೆ ಕೆಲವು ಸಲ ಕೆಲಸದಲ್ಲಿರ ಬೇಕಾದರೆ ಪ್ರತಿನಿಮಿಷವೂ ಆನ್ಲೈನ್ ಇದ್ರೇನೆ ನಿನಗೆ ಸಂಬಳ ಅಂತಿದ್ರೆ ನೋಡಪ್ಪಾ ಕಂಪ್ಯೂಟರ್ ಈ ತರ ಕೆಲ್ಸ ನಿಲ್ಲಿಸದ ಹಾಗೆ ಓಡ್ತಾನೇ ಇರ್ಬೇಕು.

ಇದೆರಡನ್ನು ಪಕ್ಕಕ್ಕಿಟ್ಟು ಸ್ವಲ್ಪ ವಿದ್ಯುತ್ ಉಳಿಸೋಣ ಅಂತ ನಿಮ್ಮ ತಲೆಗೆ ಬಂದ್ರೆ ಮತ್ತೊಂದೆರಡು ಪ್ರಶ್ನೆಗಳು ನಮ್ಮ ಮುಂದಿರುತ್ತವೆ. ಕಂಪ್ಯೂಟರ್ ಅನ್ನು ಪೂರ್ಣವಾಗಿ ಸ್ಥಗಿತಗೊಳಿಸೋದಾ, ಇಲ್ಲ ತಾತ್ಕಾಲಿಕವಾಗಿ ಅದರ ಕೆಲಸಗಳನ್ನು ನಿಲ್ಲಿಸೋದಾ ಅಂತ.

ಈಗಾಗ್ಲೇ ಕಂಪ್ಯೂಟರಿನಲ್ಲಿ ಕಂಡು ಬರುವ ಕೆಲವು ಬಟನ್ನುಗಳನ್ನು ಗಮನಿಸಿದ್ದರೆ ಅಲ್ಲೇ hibernate/suspend ಅನ್ನೋ ಆಯ್ಕೆಗಳನ್ನು ನೋಡಿರಬೇಕಲ್ವೇ? ಇದು ಏನ್ಮಾಡುತ್ತೆ ಅಂತ ನಿಮಗೆ ಗೊತ್ತಿದೆಯಾ?

ಹೈಬರ್ನೇಟ್ ನಿಮ್ಮ ಕಂಪ್ಯೂಟರ್ನಲ್ಲಿ ನೆಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಯಥಾಸ್ಥಿತಿಯಲ್ಲಿ ಹಾರ್ಡ್ ಡಿಸ್ಕ್ ಗೆ ಸೇವ್ ಮಾಡಿಟ್ಟು ನಿಮ್ಮ ಕಂಪ್ಯೂಟರ್ ನಿದ್ರಾಸ್ಥಿತಿಯಲ್ಲಿರುವಂತೆ ಮಾಡುತ್ತದೆ. ಮತ್ತೆ ಕಂಪ್ಯೂಟರ್ ಅನ್ನು ಮರುಚಾಲನೆ ಮಾಡಿದಾಗ ಸೇವ್ ಆದ session ನಿಂದ ಮತ್ತೆ ಎಲ್ಲಾ ಕಾರ್ಯಕ್ರಮಗಳು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಹಾಗಿದ್ರೆ ಸಸ್ಪೆಂಡ್ ಗೇನು ಕೆಲಸ ಅಂತೀರಾ?

ಇದು ತಾತ್ಕಾಲಿಕವಾಗಿ ನಿಮ್ಮ ಕಂಪ್ಯೂಟರ್ ಅನ್ನು ಕಡಿಮೆ ವಿದ್ಯುತ್ ಉಪಯೋಗಿಸುವಂತೆ ಅಣಿಮಾಡುತ್ತದೆ. ವಿದ್ಯುತ್ ಸಂಪರ್ಕ ಕಡಿದರೆ ಮೆಮೋರಿ ಚಿಪ್ (RAM) ಚಿಪ್ ನಲ್ಲಿ ಶೇಖರಿಸಿಡುವ session ಇನ್ಪಾರ್ಮೇಷನ್ ಅಳಿಸಿ ಹೋಗುತ್ತದೆ ಮತ್ತು ನೀವು ಮೊದಲಿನಿಂದ ಎಲ್ಲಾ ಕಾರ್ಯಕ್ರಮಗಳನ್ನು ಶುರುಮಾಡಬೇಕು. ಇಲ್ಲಿ ನಿಮ್ಮ ಸಿಸ್ಟಂ ಪೂರ್ಣವಾಗಿ ನಿಶ್ಚಲವಾಗುವುದಿಲ್ಲ. ಮಾನೀಟರ್, ಹಾರ್ಡಿಸ್ಕ್ ಇತ್ಯಾದಿಗಳು ನಿಮ್ಮ ಮುಂದಿನ ಸಂಕೇತ ಬರುವವರೆಗೆ ನಿದ್ರಿಸುತ್ತಿರುತ್ತವೆ ಅಷ್ಟೇ. ನೀವು ಕೀಬೋರ್ಡ್ ನ ಕೀಲಿ ಕ್ಲಿಕ್ಕಿಸಿದರೆ ಮತ್ತೆ ನೀವು ಕಾರ್ಯೋನ್ಮುಖವಾಗಬಹುದು.

ನಾನು ನನ್ನ ಲ್ಯಾಪ್ಟಾಪ್ ಅನ್ನೇ ಮನೆಯಲ್ಲೂ ಮತ್ತು ಆಫೀಸಿನಲ್ಲೂ ಉಪಯೋಗಿಸುವುದರಿಂದ ಪ್ರತಿ ಭಾರಿ ಮತ್ತದೇ ತಂತ್ರಾಂಶಗಳನ್ನು ಓಪನ್ ಮಾಡ್ಬೇಕಾಗಿಲ್ಲ. ಮನೆಯಲ್ಲಿ ಕೆಲಸ ಮುಗಿದ ತಕ್ಷಣ ಲ್ಯಾಪ್ಟಾಪ್ ಮುಚ್ಚಿದರೆ ತಂತಾನೇ ಅದು ಹೈಬರ್ನೇಟ್ ಸ್ಥಿತಿಗೆ ಮರಳುತ್ತದೆ. ಅಫೀಸಿಗೆ ತಂದು ಮತ್ತೆ ಆನ್ ಮಾಡಿದರಾಯಿತು. ಕೆಲಸ ಮುಂದುವರೆಸ ಬಹುದು. ನಾನು ೩೦ ನಿಮಿಷಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡ್ಲಿಲ್ಲ ಅಂದಾಗ ಸಿಸ್ಟಂ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸೋದು ಬೇಡ ಅಂದಾಗ ಅದು ತನ್ನಂತಾನೇ suspend ಮಾಡಿಕೊಳ್ಳೋ ಹಾಗೂ ಮಾಡಬಹುದು.

ಇದಕ್ಕೆ ನಿಮ್ಮ ಕಂಪ್ಯೂಟರಿನಲ್ಲಿ ಕಾಣುವ ಬ್ಯಾಟರಿ ಅಥವಾ ಪವರ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ ಅದರ properties ಗೆ ನುಗ್ಗಿ. ಅಲ್ಲಿ ಪವರ್ ಮ್ಯಾನೇಜರ್ ನಲ್ಲಿ ಕಂಡು ಬರುವ ಕೆಲವು ವಿಷಯಗಳ ಮೇಲೆ ಕಣ್ಣಾಡಿಸಿದರೆ ನಿಮ್ಮ ಕೆಲಸ ಸುಲಭವಾಗುತ್ತೆ.

ನನ್ನ ಲ್ಯಾಪ್ಟಾಪ್ ನಲ್ಲಿ ವಿದ್ಯುತ್ ಉಪಯೋಗದ ಗ್ರಾಫ್ ಈ ಕೆಳಕಂಡಂತಿದೆ. ಎಷ್ಟು ಸಲ ಹೈಬರ್ನೇಟ್ ಆಗಿದೆ ಅಂತ ಕೂಡ ನೀವು ಕಾಣಬಹುದು.


ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ?

ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನು ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ.ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನು ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ ಮಾಡಬೇಕಾದಂತಹ ಕಾಲವೊಂದಿತ್ತು. ಇಂದು ಒಂದು ಸ್ವಿಚ್ ಅದುಮಿದರೆ ಸಾಕು, ಸೂಪರ್ ಕಂಪ್ಯೂಟರ್ ಕೂಡ ಕಾರ್ಯನಿರ್ವಹಿಸಲು ಶುರುಮಾಡ್ತದೆ. ಬೂಟ್ ಪ್ರೊಸೆಸ್  ಒಂದು ಕಾರ್ಯಕ್ರಮ. ಇದನ್ನು ಸುಲಭಗೊಳಿಸಿದರೂ ಅದೊಂದು ಕ್ಲಿಷ್ಟಕರ ಕಾರ್ಯ. ಅಂತಹ ಕೆಲಸವನ್ನು ಮಾಡಲಿಕ್ಕಾಗಿಯೇ ಅಲ್ಲವೇ ಕಂಪ್ಯೂಟರ್ ಇರೋದು.

ಮೊದಲೇ ಹೇಳಿದಂತೆ ಡೆಸ್ಕ್ ಟಾಪ್  ಕಂಪ್ಯೂಟರ್ ಇರಲಿ, ಸೂಪರ್ ಕಂಪ್ಯೂಟರ್ , ಮೊಬೈಲ್, ಪಿ.ಡಿ.ಎ ಯಾವುದೇ ಇರಲಿ ಅದರಲ್ಲಿರುವ ಲಿನಕ್ಸ್ ಬೂಟ್ ಆಗೋದು ಮಾತ್ರ  ಒಂದೇ ರೀತಿ.

ಬೂಟ್ ಪ್ರೊಸೆಸ್

ಈ ಚಿತ್ರ ನಿಮಗೆ ಲಿನಕ್ಸ್ ಬೂಟ್ ಪ್ರೊಸೆಸ್ ನ ವಿವಿಧ ಹಂತಗಳನ್ನು ತೋರಿಸುತ್ತದೆ

ನಿಮ್ಮ ಕಂಪ್ಯೂಟರಿನ ಮುಟ್ಟಿ ನೋಡಬಹುದಾದ ಎಲ್ಲ ಭಾಗಗಳು (physical components) ಹಾರ್ಡ್ ವೇರ್ ಗಳು ವಸ್ತುಗಳು. ಅಂದ್ರೆ ಸಿ.ಪಿಯು ಬಾಕ್ಸ್ (ಮದರ್ ಬೋರ್ಡ್,ಪ್ರೊಸೆಸರ್, ಪ್ಲಾಪಿ ಡಿಸ್ಕ್, ಸಿ.ಡಿ/ಡಿ.ವಿ.ಡಿ, ಹಾರ್ಡ್ ಡಿಸ್ಕ್, ಮೆಮೊರಿ, ವಿಡಿಯೋ ಕಾರ್ಡ್, ಆಡಿಯೋ ಕಾರ್ಡ್, ನೆಟ್ ವರ್ಕ್ ಕಾರ್ಡ್ ಇತ್ಯಾದಿಗಳು ಇರುವ ಬಾಕ್ಸ್. ಇದಕ್ಕೆ ಇತರೆ ಹಾರ್ಡ್ ವೇರ್ ಗಳು ಜೋಡಣೆಯಾಗಿರುತ್ತವೆ), ಮೌಸ್, ಕೀಬೋರ್ಡ್, ಮಾನೀಟರ್, ಪ್ರಿಂಟರ್ ಇತ್ಯಾದಿ. ಪವರ್ ಬಟನ್ ಅದುಮಿದಾಕ್ಷಣ ಇವೆಲ್ಲಾ ಒಂದಕ್ಕೊಂದು ಮಾತಾಡ್ಕೊಂಡು ಕೆಲಸ ಮಾಡಲು ತಯಾರಾಗ್ತವೆ ಅಲ್ವೇ? ಇದಕ್ಕೆ ಕಾರಣ ಬಯೋಸ್. ಪವರ್ ಆನ್ ಮಾಡಿದಾಕ್ಷಣ ಇದು ಕಾರ್ಯೋನ್ಮುಖವಾಗುತ್ತದೆ.

ಬಯೋಸ್ ಅಂದರೇನು?

ಬಯೋಸ್(BIOS) ಎಂಬುದು ಬೇಸಿಕ್ ಇನ್ ಪುಟ್/ಔಟ್ ಪುಟ್ ಸಿಸ್ಟಮ್ (Basic Input/Output System) ಎಂಬುದರ ಸಂಕ್ಷಿಪ್ತರೂಪ. ಇದು ನಿಮ್ಮ ಕಂಪ್ಯೂಟರ್ ಚಾಲನೆಯಾಗಿ ಕೆಲಸ ಮಾಡಲು ಬೇಕಾದ ವಿದ್ಯುನ್ಮಾನ ಆದೇಶಗಳ/ಸಂಕೇತಗಳ (electronic instructions) ಒಂದು ಗುಂಪು. ಬಯೋಸ್ ನಿಮ್ಮ ಕಂಪ್ಯೂಟರಿನ ಮದರ್ ಬೋರ್ಡ್ ಒಳಗೆ ಒಂದು ಸಣ್ಣ ಸ್ಮೃತಿ ಕೋಶದಲ್ಲಿ (computer chip) ಅಡಗಿ ಕುಳಿತಿದೆ. ಇದು ನಿಮ್ಮ ಇತರೆ ಡ್ರೈವ್ ಗಳಿಗಿಂತ ಹೆಚ್ಚು ಕಾಲ ಉಳಿಯುವಂತೆ ತಯಾರಿಸಲಾಗಿದೆ.

ಬಯೋಸ್ ನ ಮುಖ್ಯ ಕೆಲಸ ಏನು?

ಪೋಸ್ಟ್ (POST – power-on self test) ಅನ್ನುವ ಪ್ರೊಗ್ರಾಮ್ ಗೆ ಸಂಕೇತಗಳನ್ನು ಕಳಿಸೋದು. ಅಂದರೆ ನೀವು ಕಂಪ್ಯೂಟರನ್ನು ಚಾಲನೆ ಮಾಡಿದ ತಕ್ಷಣ ಕಾಣುವ ಮೊದಲ ಪ್ರೋಗ್ರಾಮ್ ಅಥವಾ ಕಪ್ಪು ಬಣ್ಣದ ಪರದೆಯಲ್ಲಿ ನಡೆಯುವ ಮೊದಲ ಕೆಲಸ. ಇದು ಕಂಪ್ಯೂಟರನ ಸುಲಲಿತ ಚಾಲನೆಗೆ ತನ್ನಲ್ಲಿರಬೇಕಾದ ಎಲ್ಲ ಅಗತ್ಯ ಹಾರ್ಡ್ ವೇರ್ ಗಳು (ಮೆಮೊರಿ, ಕೀ ಬೋರ್ಡ್ ಇತ್ಯಾದಿ) ಇವೆಯೇ ಇಲ್ಲವೇ ಅನ್ನುವುದನ್ನು ತನ್ನಂತಾನೆ ಪರೀಕ್ಷಿಸಿ ಕೊಳ್ಳಲು (ಸ್ವಪರೀಕ್ಷೆ) ಇರುವ ಸಣ್ಣ ಪ್ರೊಗ್ರಾಮ್. ಹಾರ್ಡ್ವೇರ್ ಗಳಲ್ಲಿ ಏನಾದರೂ ತೊಂದರೆ ಇದ್ದರೆ, ಬಯೋಸ್ ಇದನ್ನು ನಮಗೆ ಅರ್ಥವಾಗುವಂತಹ ಸಂದೇಶವನ್ನು ನೀಡುವಂತೆ ಕಂಪ್ಯೂಟರ್ ಗೆ ಆದೇಶಿಸುತ್ತದೆ. ಈ ಸಂದೇಶಗಳು ನಮಗೆ ಬೀಪ್ (BEEP) ಗಳಿಂದ ಕೂಡಿದ ಸದ್ದಿನ ಮೂಲಕ ಕೇಳಿ ಬರುತ್ತವೆ.

ಇದೇ ಬಯೋಸ್, ನಿಮ್ಮ ಕಂಪ್ಯೂಟರ್ ನ ನಿರ್ಣಾಯಕ ಅಂಗಗಳಾದ ಡ್ರೈವ್ ಗಳು, ಮೆಮೋರಿಗಳು ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡಲು ಬೇಕಾದ ಮೂಲ ಮಾಹಿತಿಯನ್ನು ಕಳಿಸುತ್ತದೆ. ಈ ಮೂಲ ಮಾಹಿತಿಗಳು ಮತ್ತು ಪೋಸ್ಟ್ ಪರೀಕ್ಷೆ ಮುಗಿದ ನಂತರ, ಆಪರೇಟಿಂಗ್ ಸಿಸ್ಟಂ ನಿಮ್ಮ ಕಂಪ್ಯೂಟರಿನ ಒಂದು ಡ್ರೈವ್ ನ ಮೂಲಕ ಲೋಡ್ ಆಗಲು (ಚಾಲನೆಯಾಗಲು) ಶುರು ಮಾಡುತ್ತದೆ.

ಕಂಪ್ಯೂಟರಿನ ಬಳಕೆದಾರರಾದ ನಾವು, ಬಯೋಸನ್ನು ನಮಗೆ ಬೇಕಿರುವ ಡ್ರೈವ್ ನ ಮೂಲಕ ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡುವ ಹಾಗೆ ತಯಾರು ಮಾಡಿಕೊಳ್ಳಬಹುದು. ಬಯೋಸ್ ನ ಕಾನ್ಫಿಗರೇಷನ್ ಪರದೆ (configuration screen) ಮೂಲಕ ನಾವಿದನ್ನು ಸಾಧಿಸಬಹುದು. ಈ ಪರದೆಯನ್ನು ಕಂಪ್ಯೂಟರ್ ಚಾಲನೆ ಆಗುತ್ತಿರುವಾಗ “F10″ ಅಥವಾ “DEL” ಎನ್ನುವ ವಿಶೇಷ ಕೀ ಗಳನ್ನು ಕೀಲಿಸುವುದರಿಂದ ಪ್ರವೇಶಿಸಬಹುದು. ನಿಮ್ಮ ಕಂಪ್ಯೂಟರಿನ ಕಂಪನಿಯವರು ನೀಡಿರುವ ಕೈಪಿಡಿ (manual) ನಿಮಗೆ ಈ “ವಿಶೇಷ ಕೀ” ಬಗ್ಗೆ ತಿಳಿಸುತ್ತದೆ ಅಥವಾ POST ಪರದೆಯನ್ನು ನೀವು ಗಮನವಿಟ್ಟು ನೋಡಿದರೆ ಅಲ್ಲಿ ಇದರ ಮಾಹಿತಿ ಸಿಗುತ್ತದೆ. ನಿಮ್ಮ ಕಂಪ್ಯೂಟರ್ ನಿಮಗೆ ಇದನ್ನು ಓದಲು ಸಾಕಷ್ಟು ಸಮಯ ನೀಡುತ್ತಿಲ್ಲವೆಂದಾದರೆ “Tab” ಕೀ ಯನ್ನು ಕಂಪ್ಯೂಟರ್ ಚಾಲನೆ ಮಾಡಿದಾಕ್ಷಣ ಒತ್ತಿ.

ನೀವು ಬಯೋಸ್ ನ ವಿನ್ಯಾಸ ಪರದೆಯನ್ನು ಪ್ರವೇಶಿಸಿದ ನಂತರ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಸಿ.ಡಿ/ಡಿ.ವಿ.ಡಿ ಯಿಂದ ಆಪರೇಟಿಂಗ್ ಸಿಸ್ಟಂ ಶುರುವಾಗಬೇಕು ಅನ್ನುವ ನಿರ್ದೇಶನವನ್ನು ಬಯೋಸ್ ಗೆ ನೀಡುವುದು. ಇದರ ಬಗ್ಗೆ ಕೂಡ ಹೆಚ್ಚಿನ ಮಾಹಿತಿಯನ್ನು ನಿಮ್ಮ ಕಂಪ್ಯೂಟರಿನ ಕೈಪಿಡಿಯಲ್ಲಿ ಪಡೆಯಬಹುದು. ಇಲ್ಲಾಂದ್ರೆ, ಬಯೋಸ್ ನ ಪರದೆಯಲ್ಲಿರುವ ಅಂಶಗಳನ್ನು ಓದಿಅರೆ ನೀವು “Boot Options” ಎನ್ನುವ ಒಂದು ವಿಭಾಗಕ್ಕೆ ಒಮ್ಮೆ ಬರುತ್ತೀರ. ಬಯೋಸ್ ನಲ್ಲಿ ನೀವೇನಾದರೂ ತಪ್ಪು ಮಾಡಿದಿರಿ ಅಂತಾದ್ರೆ, “Esc” ಕೀ ಒತ್ತಿ ನೀವು ಮಾಡಿದ ಬದಲಾವಣೆಗಳನ್ನು ಬಯೋಸಿನಲ್ಲಿ ಉಳಿಸದೆ ಆಚೆ ಬನ್ನಿ. ಬೇರೆ ಬೇರೆ ಕಂಪ್ಯೂಟರಿನ ಬಯೋಸ್ ನಿಮಗೆ ಬೇರೆ ಬೇರೆ ರೀತಿ ಕಂಡುಬರಬಹುದು. ಇದು ಬಯೋಸ್ ನ ಆವೃತ್ತಿ (version) ಯನ್ನು ಆಧರಿಸಿರುತ್ತದೆ ಅಥವಾ ನಿಮ್ಮ ಕಂಪ್ಯೂಟರ್ ಕಂಪನಿ ಉಪಯೋಗಿಸುತ್ತಿರುವ ಬಯೋಸ್ ಬೇರೆಯದಾಗಿರಬಹುದು. (ಅದಕ್ಕಾಗಿ ಕೈಪಿಡಿ ನಿಮ್ಮ ಜೊತೆಯಲ್ಲಿದ್ದರೆ ಒಳ್ಳೆಯದು) .

ಹೆಚ್ಚಿನ ಮಾಹಿತಿ

ಇತ್ತೀಚೆಗೆ ಬಯೋಸ್ ಪ್ಲಾಶ್- ಮೆಮೊರಿ ಎಂಬ ಚಿಪ್ ನಲ್ಲಿ (ಸ್ಮೃತಿ ಕೊಶ ) ಬರುತ್ತಿರುವುದರಿಂದ, ನಿಮ್ಮ ಕಂಪ್ಯೂಟರ್ ಕಂಪನಿ ಹೊಸ ಬಯೋಸ್ ಅನ್ನು ಬಿಡುಗಡೆ ಮಾಡಿದ್ರೆ ಅದನ್ನು ನಿಮ್ಮ ಬಯೋಸ್ ಚಿಪ್ಪಿನಲ್ಲೂ ಅಪ್ ಡೇಟ್ (update) ಮಾಡಿಕೊಳ್ಳಲು ಸಾಧ್ಯವಿದೆ.ಇದರಿಂದ ಹಳೆ ಬಯೋಸ್ ನಲ್ಲಿರೋ ನ್ಯೂನ್ಯತೆಗಳನ್ನು ಸರಿಪಡಿಸಲು ಇಲ್ಲವೇ ಹೊಸ ಅಂಶಗಳನ್ನು ಸೇರಿಸಲು ಸಾಧ್ಯವಾಗುತ್ತಿದೆ. ಈ ಕ್ರಿಯೆ ನಿಮ್ಮ ಬಯೋಸ್ ನ ಆಯಸ್ಸನ್ನು ಹೆಚ್ಚಿಸಿ, ನಿಮ್ಮ ಹಾರ್ಡ್ವೇರ್ ಗಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಇದೆಲ್ಲಾ ಸರಿ, ನಾವ್ಯಾಕೆ ಇದನ್ನೆಲ್ಲಾ ತಿಳ್ಕೋಬೇಕು ಅಂತೀರಾ? ಯಾವುದೇ ಆಪರೇಟಿಂಗ್ ಸಿಸ್ಟಂ ಇರಲಿ, ಅದು ಹೇಗೆ ಕೆಲಸ ಮಾಡ್ತದೆ ಅಂತ ಗೊತ್ತಿಲ್ಲದೇ ಇದ್ರೆ ಮುಂದೆ ಯಾವುದಾದರೊಂದು ತೊಂದರೆ ಬಂದಾಗ ಆ ತೊಂದರೆಯನ್ನು ನಿವಾರಿಸೋದು ಸಾಧ್ಯವಾಗಲ್ಲ. ಕೆಲ ಸಲ ವಿಂಡೋಸ್ ನಲ್ಲಿ ತೊಂದರೆಯಾದ್ರೆ ಅದನ್ನು ಸರಿಪಡಿಸುವುದರ ಬದಲು ಸಂಪೂರ್ಣವಾಗಿ ರೀಇನ್ಟಾಲ್ ಮಾಡಿರ್ಬೇಕಲ್ಲ ನಿಮ್ಮಲ್ಲಿ ಕೆಲವರು? ಇದು ನಿಮ್ಮ ಅಮೂಲ್ಯ ಫೈಲ್ ಗಳನ್ನು ಹಾಳು ಮಾಡಿರಬಹುದು. ಇದೇನಾದರೂ ಸರ್ವರ್ ಗಳಲ್ಲಿ ಆದರೆ ಏನಾಗಬಹುದು ಅಂತ ಒಮ್ಮೆ ಯೋಚಿಸಿ ನೋಡಿ. ಇದನ್ನು ತಪ್ಪಿಸಬೇಕಾದ್ರೆ ಬೂಟ್ ಪ್ರೊಸೆಸ್ ಇತ್ಯಾದಿಗಳ ಬಗ್ಗೆ ತಿಳಿದು ಕೊಳ್ಳೋದು ಮುಖ್ಯ. ಇದು ತುಂಬಾ ಸುಲಭ ಸಹ.ಮುಂದಿನ ಸಾಲುಗಳು ನಿಮಗೆ ಅದರ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿಸುತ್ತವೆ.

ಕಂಪ್ಯೂಟರನ್ನು ಆನ್ ಮಾಡಿದಾಗ ಅಥವಾ ರಿ-ಸೆಟ್ ಮಾಡಿದಾಗ, ಪ್ರೊಸೆಸರ್ ಒಂದು ನಿರ್ದಿಷ್ಟ ಮೆಮೋರಿ ಲೊಕೇಷನ್ ನಿಂದ ತಂತ್ರಾಂಶದ ಸಾಲುಗಳನ್ನು ಕಾರ್ಯಗತಗೊಳಿಸುತ್ತದೆ. ಪರ್ಸನಲ್ ಕಂಪ್ಯೂಟರಲ್ಲಿ ಇದು ಬಯೋಸ್ ನಲ್ಲಿರುತ್ತದೆ. ಪ್ರೊಸೆಸರ್ ನಲ್ಲಿರುವ CPU (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್) ಈ ಕಾರ್ಯಕ್ರಮವನ್ನು ಫ್ಲಾಷ್ / ROM ಚಿಪ್ ನ ಒಂದು ಮೆಮೋರಿ ಚಿಪ್ ನಿಂದ ಪಡೆದು ಕಾರ್ಯಗತಗೊಳಿಸುತ್ತದೆ.ಇದೆಲ್ಲಾ ಒಂದೇ ಫಲಿತಾಂಶವನ್ನು ನೀಡುತ್ತದೆ. ಒಟ್ಟಿನಲ್ಲಿ ಬಯೋಸ್ ಸಿಸ್ಟಂ ಬೂಟ್ ಆಗಲು ಬೇಕಿರುವ ಎಲ್ಲ ಹಾರ್ಡ್ವೆರ್ ಡಿವೈಸ್ ಗಳನ್ನ ಕಂಡುಕೊಳ್ಳಬೇಕು (ಬಯೋಸ್ ಹ್ಯಾಗೆ ಕಾರ್ಯನಿರ್ವಹಿಸುತ್ತದೆ ಅನ್ನುವುದು ಇನ್ನೂ ಕುತೂಹಲಕಾರಿ) ಹಾಗೂ ಯಾವ ಮಾಧ್ಯಮವನ್ನು (ಡಿವೈಸ್) ಬೂಟ್ ಮಾಡಬೇಕು (ಅಂದ್ರೆ ಎಲ್ಲಿ ನಿಮ್ಮ ಆಪರೇಟಿಂಗ್ ಸಿಸ್ಟಂ ಇದೆ) ಅನ್ನುವುದನ್ನು ತಿಳಿದುಕೊಳ್ಳಬೇಕು.

ಮೊದಲ ಹಂತದ ಬೂಟ್ ಲೋಡರ್

ಸರಿ, ಬಯೋಸ್ ಬೂಟ್ ಡಿವೈಸ್ ಕಂಡುಕೊಂಡದ್ದಾಯಿತು. ಈಗ ಮೊದಲ ಹಂತದ ಬೂಟ್ ಲೋಡರ್ ಅನ್ನು ಕಂಪ್ಯೂಟರಿನಲ್ಲಿರುವ ತಾತ್ಕಾಲಿಕ ಸ್ಮೃತಿ ಕೋಶ (RAM) ಮೆಮೋರಿಗೆ ಲೋಡ್ ಮಾಡಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಈ ಬೂಟ್ ಲೋಡರ್ ನಿಮ್ಮ ಹಾರ್ಡ್ ಡಿಸ್ಕ್ / USB ಡಿಸ್ಕ್, ಫ್ಲಾಪಿ ಡಿಸ್ಕ್ ಮುಂತಾದವುಗಳ ಮೊದಲ ಮೆಮೋರಿ ಲೊಕೇಷನ್ (MBR – Master Boot Record) ನಲ್ಲಿರುತ್ತದೆ. ಇದರ ಮುಖ್ಯ ಕೆಲಸ ನಿಮ್ಮ ಡಿಸ್ಕ್ ನಲ್ಲಿರೋ ಪಾರ್ಟೀಷನ್ ಗಳ ಮಾಹಿತಿಯನ್ನ ತನ್ನಲ್ಲಿಟ್ಟುಕೊಂಡು, ಯಾವ ಪಾರ್ಟೀಷನ್ ನಲ್ಲಿ ಎರಡನೇ ಹಂತದ ಬೂಟ್ ಲೋಡರ್ ಇದೆ ಅನ್ನೋದನ್ನು ತಿಳಿದು ಅದನ್ನ ಮೆಮೋರಿಗೆ ಲೋಡ್ ಮಾಡೋದು. MBR ನಲ್ಲಿ ೫೧೨ bytes ನಷ್ಟು ಮಾಹಿತಿಯನ್ನು ಮಾತ್ರ ಸಂಗ್ರಹಿಸಿಡಬಹುದು. ಆದರೆ ಇದರ ಪಾತ್ರ ಮಾತ್ರ ಬಹುಮುಖ್ಯ.

ಎರಡನೇ ಹಂತದ ಬೂಟ್ ಲೋಡರ್

ಎರಡನೇ ಹಂತದ ಬೂಟ್ ಲೋಡರ್ ಮೆಮೋರಿಗೆ ಲೋಡ್ ಆಗಿ ಕಾರ್ಯನಿರ್ವಹಿಸಲು ಶುರುಮಾಡಿದಾಗ ಅದು ನಿಮ್ಮ ಮುಂದೆ ಸ್ಲ್ಪಾಷ್ ಸ್ಕ್ರೀನ್ (Spalsh Screen)ಅನ್ನು ನಿಮ್ಮ ಮುಂದಿಡುತ್ತದೆ. ನಿಮ್ಮ ಕಂಪ್ಯೂಟರ್ ನಲ್ಲಿ ಲಿನಕ್ಸ್ ಇನ್ಸ್ಟಾಲ್ ಆಗಿದ್ದರೆ, GRUB ಅನ್ನೋ ತಂತ್ರಾಂಶದ ಸ್ಪ್ಲಾಷ್ ಸ್ಕ್ರೀನ್ ನಿಮ್ಮ ಮುಂದೆ ಲಿನಕ್ಸ್ ಮತ್ತು ಇತರೆ ಆಪರೇಟಿಂಗ್ ಸಿಸ್ಟಂಗಳನ್ನ ಆಯ್ಕೆಯನ್ನ ತೋರಿಸುತ್ತದೆ. ಕೆಳಗಿನ ಚಿತ್ರದಲ್ಲಿ ಅದನ್ನ ನೀಡಲಾಗಿದೆ.

GRUB ಎರಡನೇ ಹಂತದ ಬೂಟ್ ಲೋಡರ್

ಈ ಹಂತದಲ್ಲಿ ನೀವು ಬೂಟ್ ಆಗಬೇಕಿರುವವ ಗ್ನು/ಲಿನಕ್ಸ್ ಅನ್ನು ಆಯ್ಕೆ ಮಾಡಿಕೊಂಡಾಗ ಲಿನಕ್ಸ್ ಕರ್ನೆಲ್ ಇಮೇಜ್ ಮತ್ತು ಆಪ್ಶನಲ್ ಪ್ರಾರಂಭಿಕ RAM ಡಿಸ್ಕ್ (ಇದರಲ್ಲಿ ತಾತ್ಕಾಲಿಕ root ಫೈಲ್ ಸಿಸ್ಟಂ ಇರುತ್ತದೆ) ಅನ್ನು ನಿಮ್ಮ ಕಂಪ್ಯೂಟರಿನ ಮೆಮೋರಿಗೆ ಲೋಡ್ ಮಾಡಲಾಗುತ್ತದೆ. ಗ್ನು/ಲಿನಕ್ಸ್ ಹೃದಯ ಭಾಗ ಎನ್ನಬಹುದಾದ “ಕರ್ನೆಲ್” ಇಮೇಜ್ ಮೆಮೋರಿಗೆ ಲೋಡ್ ಆದ ನಂತರ ಗ್ರಬ್ (ಎರಡನೇ ಹಂತದ ಬೂಟ್ ಲೋಡರ್) ಬೂಟ್ ಪ್ರೊಸೆಸ್ ನ ನಿಯಂತ್ರಣವನ್ನು ಕರ್ನೆಲ್ ಇಮೇಜಿಗೆ ನೀಡುತ್ತದೆ. ಕಂಪ್ರೆಸ್ ಆಗಿದ್ದ ಕರ್ನೆಲ್ ಈ ಹಂತದಲ್ಲಿ ಡಿ-ಕಂಪ್ರೆಸ್ ಆಗಿ, ಮುಂದಿನ ಕಾರ್ಯಕ್ಕೆ ತನ್ನನ್ನು ತಾನು ಅಣಿ ಮಾಡಿಕೊಳ್ಳುತ್ತದೆ (Kernel Initialization Phase). ಈ ಹಂತದಲ್ಲಿ ಎರಡನೇ ಹಂತದ ಬೂಟ್ ಲೋಡರ್ ನಿಮ್ಮ ಸಿಸ್ಟಂನ ಹಾರ್ಡ್ವೇರ್ ಅನ್ನು ಎಣಿಸಿ, ಚೆಕ್ ಮಾಡುವುದರೊಂದಿಗೆ, root ಡಿವೈಸ್ ಅನ್ನು ಮೌಂಟ್ ಮಾಡುತ್ತದೆ (ಹಾರ್ಡಿಸ್ಕ್ ಅನ್ನು ಉಪಯೋಗಿಸಲಾಗುವಂತೆ ಅಣಿ ಮಾಡುವ ಕೆಲಸ mount) ಹಾಗು ಹಾರ್ಡ್ವೇರ್ ಗಳು ಕಾರ್ಯನಿರ್ವಹಿಸಲಿಕ್ಕೆ ಬೇಕಾದ ಕರ್ನೆಲ್ ಮಾಡ್ಯೂಲ್ ಗಳನ್ನು (ವಿಂಡೋಸ್ ಆಪರೇಟಿಂಗ್ ಸಿಸ್ಟಂ ನಲ್ಲಿ ಡ್ರೈವರ್ ಗಳಿವೆಯಲ್ಲ ಇವನ್ನು ಅದಕ್ಕೆ ಹೋಲಿಸಬಹುದು) ಮೆಮೋರಿಗೆ ಲೋಡ್ ಮಾಡಲಾಗುತ್ತದೆ.

ಲಾಗಿನ್ ಸ್ಕ್ರೀನ್

ಇದಾದ ನಂತರವೇ ಬಳಕೆದಾರನಿಗೆ ಬೇಕಾದ ಮೊದಲನೇ ಕಾರ್ಯಕ್ರಮ ಶುರುವಾಗುವುದು. ಇದೇ Init ಅಥವಾ user-space ಪ್ರೋಗ್ರಾಮ್. ಮುಂದೆ ಇನ್ನೂ ಕ್ಲಿಷ್ಟಕರವಾದ ಸಿಸ್ಟಂ ಪ್ರೊಗ್ರಾಮ್ ಗಳು ತಮ್ಮ ಕೆಲಸಕ್ಕೆ ಅಣಿಯಾಗುತ್ತವೆ. ಮತ್ತು ನಿಮಗೆ ಕಂಪ್ಯೂಟರ್ ಉಪಯೋಗಿಸಲು ಸಾಧ್ಯವಾಗುತ್ತವೆ. ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಲಾಗಿನ್ ಸ್ಕ್ರೀನ್ ಕಾಣಬಹುದು.

ಈಗ ಕಂಪ್ಯೂಟರ್ ಬಳಕೆದಾರನ ಪ್ರವೇಶಪದ (Login Name) ಹಾಗು ಗುಪ್ತಪದ(Password) ಬಳಸಿ ಲಾಗಿನ್ ಆಗಬಹುದು.

ಡೆಸ್ಕ್ ಟಾಪ್

ಲಾಗಿನ್ ಆದ ಬಳಿಕ ನಿಮ್ಮ ಕಂಪ್ಯೂಟರ್ ನ ಸ್ಕ್ರೀನ್ ಈ ಕೆಳಕಂಡಂತೆ ಕಾಣಿಸುತ್ತದೆ.

ಈಗ ನಿಮ್ಮ ಕಂಪ್ಯೂಟರಿನ ಮೌಸ್ ಬಳಸಿ ಡೆಸ್ಕ್ಟಾಪ್ ಮೇಲಿರುವ ಐಕಾನ್ ಗಳು, ಮೆನು ಇತ್ಯಾದಿಗಳನ್ನು ಕ್ಲಿಕ್ಕಿಸಿ ಅದರ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಬಹುದು. ಇವೇ ನಿಮ್ಮನ್ನು ಕಂಪ್ಯೂಟರಿನೊಂದಿಗೆ ವ್ಯವಹರಿಸಲು ಸಹಕರಿಸುವ ವ್ಯವಸ್ಥೆಗಳು.


ಬ್ರೌಸರ್

ಇಂಟರ್ನೆಟ್ ಅಥವಾ ಅಂತರ್ಜಾಲವನ್ನು ಜಾಲಾಡಲು ಬೇಕಿರುವ ಬ್ರೌಸರ್ ಗಳ ಪರಿಚಯವನ್ನು ಇಲ್ಲಿ ಮಾಡಿಕೊಳ್ಳೋಣ

  • ಮೋಝಿಲ್ಲಾದ ಫೈರ್ಫಾಕ್ಸ್

ಸ್ವತಂತ್ರ ಹಾಗು ಮುಕ್ತ (ಓಪನ್‌ ಸೋರ್ಸ್) ತಂತ್ರಾಂಶಗಳಲ್ಲಿ ಅತ್ಯಂತ ಯಶಸ್ವಿ ತಂತ್ರಾಂಶವೆಂದು ಹೆಸರಾದ ಫೈರ್ಫಾಕ್ಸಿನ ಜನಪ್ರಿಯತೆ ದಿನೇದಿನೆ ಹೆಚ್ಚುತ್ತಿದೆ. ಸುರಕ್ಷತೆ ಹಾಗು ಸವಲತ್ತು ಗಳನ್ನೇ ಗುರಿಯಾಗಿರಿಸಿಕೊಂಡಿರುವ ಇದು ಈಗಾಗಲೆ ಸುಮಾರು ೭೦ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕಳೆದ ವರ್ಷ ಇದರ ಕನ್ನಡ ಆವೃತ್ತಿಯೂ ಸಹ ಹೊರಬಂದಿದೆ. ಇತರೆ ಬ್ರೌಸರ್ ಗಳಿಗಿಂತ ಇದು ವೇಗವಾಗಿ ಕೆಲಸ ಮಾಡುತ್ತದೆ. ಮ್ಯಾಕ್ ನ ಸಫಾರಿ ಬ್ರೌಸರಿಗಿಂತ ೧೦ ಪಟ್ಟು ಹೆಚ್ಚು ವೇಗದಲ್ಲಿ ನೀವು ಇಂಟರ್ನೆಟ್ ಬ್ರೌಸ್ ಮಾಡಬಹುದು.

  • ಒಪೇರಾ
  • ಗೂಗಲ್ ಕ್ರೋಮ್
  • ಕಾನ್ಕ್ವೆರರ್

ಓಪನ್ ಆಫೀಸ್

ಸಾಮಾನ್ಯವಾಗಿ OpenOffice.org ಅಥವ ಸರಳವಾಗಿ ಓಪನ್‌ಆಫೀಸ್(OpenOffice) ಎಂದು ಕರೆಲಾಗುತ್ತದೆ.ಇದು ಹಲವಾರು ಕಾರ್ಯವ್ಯವಸ್ಥೆಗಳಲ್ಲಿ ಬಳಸಬಹುದಾದಂತಹ ಉಚಿತವಾಗಿ ವಿತರಿಸಲಾಗುವ ಒಂದು ಹೆಸರಾಂತ ಆಫೀಸ್ ಅನ್ವಯವಾಗಿದೆ (ಅಪ್ಲಿಕೇಶನ್). ಇದು ODF ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಅನ್ನು ತನ್ನ ಪೂರ್ವನಿಯೋಜಿತ ದತ್ತಾಂಶ ಫಾರ್ಮಾಟ್ ಆಗಿ ಬಳಸುತ್ತದೆ ಹಾಗೂ ಮೈಕ್ರೋಸಾಫ್ಟ್ ಆಫೀಸ್ ಫಾರ್ಮಾಟ್ ಅನ್ನೂ ಸಹ ಬೆಂಬಲಿಸುತ್ತದೆ. ಇದು ಪೂರ್ವನಿಯೋಜಿತವಾಗಿ ಬಳಸುವ ODF ಅನ್ನು ಜಗತ್ತಿನಾದ್ಯಂತದ ಹಲವಾರು ದೇಶಗಳಲ್ಲಿ ಸರ್ಕಾರಗಳು ದಸ್ತಾವೇಜುಗಳನ್ನು ಮುದ್ರಿಸಲು ಹಾಗೂ ಸ್ವೀಕರಿಸಲು ಶಿಷ್ಟವಾದ ಫಾರ್ಮಾಟ್ ಎಂದು ಮಾನ್ಯ ಮಾಡಿವೆ. ಮಾರ್ಚ್ ೨೦೦೯ ರ ಈಚಿಗೆ ಓಪನ್‌ಆಫೀಸ್ ಸುಮಾರು ೮೦ ಭಾಷೆಗಳಲ್ಲಿ ಹೊರಬಂದಿದೆ ಹಾಗು ಇದರಲ್ಲಿ ಕನ್ನಡವೂ ಸಹ ಒಂದು.

ರೈಟರ್(Writer)

ವರ್ಡ್ ಪ್ರೊಸೆಸರ್ ಎಂದು ಕರೆಯಲಾಗುವ ಇದು ಮೈಕ್ರೋಸಾಫ್ಟಿನ ವರ್ಡ್ ಅನ್ನು ಯತಾವತ್ತಾಗಿ ಹೋಲುತ್ತದೆ. ಇದನ್ನು ಬಳಸಿಕೊಂಡು ವರ್ಡ್ ದಸ್ತಾವೇಜಿಗಳ ರಚನೆ, ಸಂಪಾದನೆ ಹಾಗು ಉಳಿಸುವಿಕೆಯನ್ನು ಮಾಡಬಹುದಾಗಿದೆ. ಇದರ ಒಂದು ತೆರೆ ಚಿತ್ರವನ್ನು ಚಿತ್ರ ೧ ರಲ್ಲಿ ನೋಡಬಹುದಾಗಿದೆ.

ಕ್ಯಾಲ್ಕ್ (Calc)

ಮೈಕ್ರೋಸಾಫ್ಟ್ ಎಕ್ಸೆಲ್‌ನಂತೆ ಕಾರ್ಯನಿರ್ವಹಿಸುವ ಇದು ಒಂದು ಅತ್ಯಂತ ಸುಧಾರಿತ ಸ್ಪ್ರೆಡ್‌ಶೀಟ್‌ನಲ್ಲಿರಬೇಕಾದ ಎಲ್ಲಾ ಆಧುನಿಕ ವಿಶ್ಲೇಷಣೆ, ಚಾರ್ಟಿಂಗ್ ಹಾಗು ನಿರ್ಣಯ ಸವಲತ್ತನ್ನು ಹೊಂದಿದೆ. ಇದು ನಿಮಗೆ ಕೆಲಸದ ಹಾಳೆಗಳನ್ನು(ವರ್ಕ್-ಶೀಟ್) ಒದಗಿಸುತ್ತದೆ. ಇವುಗಳಲ್ಲಿ ಅಂಕೆ ರೂಪದಲ್ಲಿನ ದತ್ತಾಂಶಗಳನ್ನು ನಮೂದಿಸಿ ನಂತರ ಅವುಗಳನ್ನು ಚಿತ್ರಗಳ ರೂಪದಲ್ಲಿ ನೋಡಬಹುದಾಗಿದೆ. ಇದರ ಒಂದು ತೆರೆ ಚಿತ್ರವನ್ನು ಚಿತ್ರ ೨ ರಲ್ಲಿ ನೋಡಬಹುದಾಗಿದೆ.

ಇಂಪ್ರೆಸ್(Impress) ಇದು ಒಂದು ಪ್ರಸ್ತುತಿ ತಂತ್ರಾಂಶವಾಗಿದ್ದು, ಮೈಕ್ರೊಸಾಫ್ಟಿನ ಪವರ್ ಪಾಯಿಂಟ್ ಒದಗಿಸುವ ಎಲ್ಲಾ ಸವಲತ್ತನ್ನೂ ಇದು ಒದಗಿಸುತ್ತದೆ. ಇಂಪ್ರೆಸ್ ಎಲ್ಲಾ ಆಧುನಿಕ ಸೌಕರ್ಯಗಳಾದ ವಿಶೇಷ ಪರಿಣಾಮಗಳು (ಸ್ಪೆಶಲ್ ಎಫೆಕ್ಟ್), ಎನಿಮೇಶನ್ ಹಾಗು ಚಿತ್ರಿಸುವ ಸಾಧನಗಳಂತಹ ಮಲ್ಟಿಮೀಡಿಯ ಪ್ರಸ್ತುತಿ ಉಪಕರಣಗಳನ್ನು ಕೊಡಮಾಡುತ್ತದೆ. ಅಷ್ಟೆ ಅಲ್ಲದೆ Macromedia Flash (SWF) ಅನ್ನೂ ಒಳಗೊಂಡಂತೆ ಹಲವು ಬಗೆಯ ಗ್ರಾಫಿಕ್ಸುಗಳ ರೂಪದಲ್ಲಿ ಕಡತಗಳನ್ನು ಉಳಿಸಲು ಅನುವು ಮಾಡಿಕೊಡುತ್ತದೆ.ಇದರ ಒಂದು ತೆರೆ ಚಿತ್ರವನ್ನು ಚಿತ್ರ ೩ ರಲ್ಲಿ ನೋಡಬಹುದಾಗಿದೆ.


Copyright © 1996-2010 ಲಿನಕ್ಸಾಯಣ. ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Jarrah theme by Templates Next | Powered by WordPress