ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ?

ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನು ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ.ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನು ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ ಮಾಡಬೇಕಾದಂತಹ ಕಾಲವೊಂದಿತ್ತು. ಇಂದು ಒಂದು ಸ್ವಿಚ್ ಅದುಮಿದರೆ ಸಾಕು, ಸೂಪರ್ ಕಂಪ್ಯೂಟರ್ ಕೂಡ ಕಾರ್ಯನಿರ್ವಹಿಸಲು ಶುರುಮಾಡ್ತದೆ. ಬೂಟ್ ಪ್ರೊಸೆಸ್  ಒಂದು ಕಾರ್ಯಕ್ರಮ. ಇದನ್ನು ಸುಲಭಗೊಳಿಸಿದರೂ ಅದೊಂದು ಕ್ಲಿಷ್ಟಕರ ಕಾರ್ಯ. ಅಂತಹ ಕೆಲಸವನ್ನು ಮಾಡಲಿಕ್ಕಾಗಿಯೇ ಅಲ್ಲವೇ ಕಂಪ್ಯೂಟರ್ ಇರೋದು.

ಮೊದಲೇ ಹೇಳಿದಂತೆ ಡೆಸ್ಕ್ ಟಾಪ್  ಕಂಪ್ಯೂಟರ್ ಇರಲಿ, ಸೂಪರ್ ಕಂಪ್ಯೂಟರ್ , ಮೊಬೈಲ್, ಪಿ.ಡಿ.ಎ ಯಾವುದೇ ಇರಲಿ ಅದರಲ್ಲಿರುವ ಲಿನಕ್ಸ್ ಬೂಟ್ ಆಗೋದು ಮಾತ್ರ  ಒಂದೇ ರೀತಿ.

ಬೂಟ್ ಪ್ರೊಸೆಸ್

ಈ ಚಿತ್ರ ನಿಮಗೆ ಲಿನಕ್ಸ್ ಬೂಟ್ ಪ್ರೊಸೆಸ್ ನ ವಿವಿಧ ಹಂತಗಳನ್ನು ತೋರಿಸುತ್ತದೆ

ನಿಮ್ಮ ಕಂಪ್ಯೂಟರಿನ ಮುಟ್ಟಿ ನೋಡಬಹುದಾದ ಎಲ್ಲ ಭಾಗಗಳು (physical components) ಹಾರ್ಡ್ ವೇರ್ ಗಳು ವಸ್ತುಗಳು. ಅಂದ್ರೆ ಸಿ.ಪಿಯು ಬಾಕ್ಸ್ (ಮದರ್ ಬೋರ್ಡ್,ಪ್ರೊಸೆಸರ್, ಪ್ಲಾಪಿ ಡಿಸ್ಕ್, ಸಿ.ಡಿ/ಡಿ.ವಿ.ಡಿ, ಹಾರ್ಡ್ ಡಿಸ್ಕ್, ಮೆಮೊರಿ, ವಿಡಿಯೋ ಕಾರ್ಡ್, ಆಡಿಯೋ ಕಾರ್ಡ್, ನೆಟ್ ವರ್ಕ್ ಕಾರ್ಡ್ ಇತ್ಯಾದಿಗಳು ಇರುವ ಬಾಕ್ಸ್. ಇದಕ್ಕೆ ಇತರೆ ಹಾರ್ಡ್ ವೇರ್ ಗಳು ಜೋಡಣೆಯಾಗಿರುತ್ತವೆ), ಮೌಸ್, ಕೀಬೋರ್ಡ್, ಮಾನೀಟರ್, ಪ್ರಿಂಟರ್ ಇತ್ಯಾದಿ. ಪವರ್ ಬಟನ್ ಅದುಮಿದಾಕ್ಷಣ ಇವೆಲ್ಲಾ ಒಂದಕ್ಕೊಂದು ಮಾತಾಡ್ಕೊಂಡು ಕೆಲಸ ಮಾಡಲು ತಯಾರಾಗ್ತವೆ ಅಲ್ವೇ? ಇದಕ್ಕೆ ಕಾರಣ ಬಯೋಸ್. ಪವರ್ ಆನ್ ಮಾಡಿದಾಕ್ಷಣ ಇದು ಕಾರ್ಯೋನ್ಮುಖವಾಗುತ್ತದೆ.

ಬಯೋಸ್ ಅಂದರೇನು?

ಬಯೋಸ್(BIOS) ಎಂಬುದು ಬೇಸಿಕ್ ಇನ್ ಪುಟ್/ಔಟ್ ಪುಟ್ ಸಿಸ್ಟಮ್ (Basic Input/Output System) ಎಂಬುದರ ಸಂಕ್ಷಿಪ್ತರೂಪ. ಇದು ನಿಮ್ಮ ಕಂಪ್ಯೂಟರ್ ಚಾಲನೆಯಾಗಿ ಕೆಲಸ ಮಾಡಲು ಬೇಕಾದ ವಿದ್ಯುನ್ಮಾನ ಆದೇಶಗಳ/ಸಂಕೇತಗಳ (electronic instructions) ಒಂದು ಗುಂಪು. ಬಯೋಸ್ ನಿಮ್ಮ ಕಂಪ್ಯೂಟರಿನ ಮದರ್ ಬೋರ್ಡ್ ಒಳಗೆ ಒಂದು ಸಣ್ಣ ಸ್ಮೃತಿ ಕೋಶದಲ್ಲಿ (computer chip) ಅಡಗಿ ಕುಳಿತಿದೆ. ಇದು ನಿಮ್ಮ ಇತರೆ ಡ್ರೈವ್ ಗಳಿಗಿಂತ ಹೆಚ್ಚು ಕಾಲ ಉಳಿಯುವಂತೆ ತಯಾರಿಸಲಾಗಿದೆ.

ಬಯೋಸ್ ನ ಮುಖ್ಯ ಕೆಲಸ ಏನು?

ಪೋಸ್ಟ್ (POST – power-on self test) ಅನ್ನುವ ಪ್ರೊಗ್ರಾಮ್ ಗೆ ಸಂಕೇತಗಳನ್ನು ಕಳಿಸೋದು. ಅಂದರೆ ನೀವು ಕಂಪ್ಯೂಟರನ್ನು ಚಾಲನೆ ಮಾಡಿದ ತಕ್ಷಣ ಕಾಣುವ ಮೊದಲ ಪ್ರೋಗ್ರಾಮ್ ಅಥವಾ ಕಪ್ಪು ಬಣ್ಣದ ಪರದೆಯಲ್ಲಿ ನಡೆಯುವ ಮೊದಲ ಕೆಲಸ. ಇದು ಕಂಪ್ಯೂಟರನ ಸುಲಲಿತ ಚಾಲನೆಗೆ ತನ್ನಲ್ಲಿರಬೇಕಾದ ಎಲ್ಲ ಅಗತ್ಯ ಹಾರ್ಡ್ ವೇರ್ ಗಳು (ಮೆಮೊರಿ, ಕೀ ಬೋರ್ಡ್ ಇತ್ಯಾದಿ) ಇವೆಯೇ ಇಲ್ಲವೇ ಅನ್ನುವುದನ್ನು ತನ್ನಂತಾನೆ ಪರೀಕ್ಷಿಸಿ ಕೊಳ್ಳಲು (ಸ್ವಪರೀಕ್ಷೆ) ಇರುವ ಸಣ್ಣ ಪ್ರೊಗ್ರಾಮ್. ಹಾರ್ಡ್ವೇರ್ ಗಳಲ್ಲಿ ಏನಾದರೂ ತೊಂದರೆ ಇದ್ದರೆ, ಬಯೋಸ್ ಇದನ್ನು ನಮಗೆ ಅರ್ಥವಾಗುವಂತಹ ಸಂದೇಶವನ್ನು ನೀಡುವಂತೆ ಕಂಪ್ಯೂಟರ್ ಗೆ ಆದೇಶಿಸುತ್ತದೆ. ಈ ಸಂದೇಶಗಳು ನಮಗೆ ಬೀಪ್ (BEEP) ಗಳಿಂದ ಕೂಡಿದ ಸದ್ದಿನ ಮೂಲಕ ಕೇಳಿ ಬರುತ್ತವೆ.

ಇದೇ ಬಯೋಸ್, ನಿಮ್ಮ ಕಂಪ್ಯೂಟರ್ ನ ನಿರ್ಣಾಯಕ ಅಂಗಗಳಾದ ಡ್ರೈವ್ ಗಳು, ಮೆಮೋರಿಗಳು ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡಲು ಬೇಕಾದ ಮೂಲ ಮಾಹಿತಿಯನ್ನು ಕಳಿಸುತ್ತದೆ. ಈ ಮೂಲ ಮಾಹಿತಿಗಳು ಮತ್ತು ಪೋಸ್ಟ್ ಪರೀಕ್ಷೆ ಮುಗಿದ ನಂತರ, ಆಪರೇಟಿಂಗ್ ಸಿಸ್ಟಂ ನಿಮ್ಮ ಕಂಪ್ಯೂಟರಿನ ಒಂದು ಡ್ರೈವ್ ನ ಮೂಲಕ ಲೋಡ್ ಆಗಲು (ಚಾಲನೆಯಾಗಲು) ಶುರು ಮಾಡುತ್ತದೆ.

ಕಂಪ್ಯೂಟರಿನ ಬಳಕೆದಾರರಾದ ನಾವು, ಬಯೋಸನ್ನು ನಮಗೆ ಬೇಕಿರುವ ಡ್ರೈವ್ ನ ಮೂಲಕ ಆಪರೇಟಿಂಗ್ ಸಿಸ್ಟಂ ಅನ್ನು ಲೋಡ್ ಮಾಡುವ ಹಾಗೆ ತಯಾರು ಮಾಡಿಕೊಳ್ಳಬಹುದು. ಬಯೋಸ್ ನ ಕಾನ್ಫಿಗರೇಷನ್ ಪರದೆ (configuration screen) ಮೂಲಕ ನಾವಿದನ್ನು ಸಾಧಿಸಬಹುದು. ಈ ಪರದೆಯನ್ನು ಕಂಪ್ಯೂಟರ್ ಚಾಲನೆ ಆಗುತ್ತಿರುವಾಗ “F10″ ಅಥವಾ “DEL” ಎನ್ನುವ ವಿಶೇಷ ಕೀ ಗಳನ್ನು ಕೀಲಿಸುವುದರಿಂದ ಪ್ರವೇಶಿಸಬಹುದು. ನಿಮ್ಮ ಕಂಪ್ಯೂಟರಿನ ಕಂಪನಿಯವರು ನೀಡಿರುವ ಕೈಪಿಡಿ (manual) ನಿಮಗೆ ಈ “ವಿಶೇಷ ಕೀ” ಬಗ್ಗೆ ತಿಳಿಸುತ್ತದೆ ಅಥವಾ POST ಪರದೆಯನ್ನು ನೀವು ಗಮನವಿಟ್ಟು ನೋಡಿದರೆ ಅಲ್ಲಿ ಇದರ ಮಾಹಿತಿ ಸಿಗುತ್ತದೆ. ನಿಮ್ಮ ಕಂಪ್ಯೂಟರ್ ನಿಮಗೆ ಇದನ್ನು ಓದಲು ಸಾಕಷ್ಟು ಸಮಯ ನೀಡುತ್ತಿಲ್ಲವೆಂದಾದರೆ “Tab” ಕೀ ಯನ್ನು ಕಂಪ್ಯೂಟರ್ ಚಾಲನೆ ಮಾಡಿದಾಕ್ಷಣ ಒತ್ತಿ.

ನೀವು ಬಯೋಸ್ ನ ವಿನ್ಯಾಸ ಪರದೆಯನ್ನು ಪ್ರವೇಶಿಸಿದ ನಂತರ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಸಿ.ಡಿ/ಡಿ.ವಿ.ಡಿ ಯಿಂದ ಆಪರೇಟಿಂಗ್ ಸಿಸ್ಟಂ ಶುರುವಾಗಬೇಕು ಅನ್ನುವ ನಿರ್ದೇಶನವನ್ನು ಬಯೋಸ್ ಗೆ ನೀಡುವುದು. ಇದರ ಬಗ್ಗೆ ಕೂಡ ಹೆಚ್ಚಿನ ಮಾಹಿತಿಯನ್ನು ನಿಮ್ಮ ಕಂಪ್ಯೂಟರಿನ ಕೈಪಿಡಿಯಲ್ಲಿ ಪಡೆಯಬಹುದು. ಇಲ್ಲಾಂದ್ರೆ, ಬಯೋಸ್ ನ ಪರದೆಯಲ್ಲಿರುವ ಅಂಶಗಳನ್ನು ಓದಿಅರೆ ನೀವು “Boot Options” ಎನ್ನುವ ಒಂದು ವಿಭಾಗಕ್ಕೆ ಒಮ್ಮೆ ಬರುತ್ತೀರ. ಬಯೋಸ್ ನಲ್ಲಿ ನೀವೇನಾದರೂ ತಪ್ಪು ಮಾಡಿದಿರಿ ಅಂತಾದ್ರೆ, “Esc” ಕೀ ಒತ್ತಿ ನೀವು ಮಾಡಿದ ಬದಲಾವಣೆಗಳನ್ನು ಬಯೋಸಿನಲ್ಲಿ ಉಳಿಸದೆ ಆಚೆ ಬನ್ನಿ. ಬೇರೆ ಬೇರೆ ಕಂಪ್ಯೂಟರಿನ ಬಯೋಸ್ ನಿಮಗೆ ಬೇರೆ ಬೇರೆ ರೀತಿ ಕಂಡುಬರಬಹುದು. ಇದು ಬಯೋಸ್ ನ ಆವೃತ್ತಿ (version) ಯನ್ನು ಆಧರಿಸಿರುತ್ತದೆ ಅಥವಾ ನಿಮ್ಮ ಕಂಪ್ಯೂಟರ್ ಕಂಪನಿ ಉಪಯೋಗಿಸುತ್ತಿರುವ ಬಯೋಸ್ ಬೇರೆಯದಾಗಿರಬಹುದು. (ಅದಕ್ಕಾಗಿ ಕೈಪಿಡಿ ನಿಮ್ಮ ಜೊತೆಯಲ್ಲಿದ್ದರೆ ಒಳ್ಳೆಯದು) .

ಹೆಚ್ಚಿನ ಮಾಹಿತಿ

ಇತ್ತೀಚೆಗೆ ಬಯೋಸ್ ಪ್ಲಾಶ್- ಮೆಮೊರಿ ಎಂಬ ಚಿಪ್ ನಲ್ಲಿ (ಸ್ಮೃತಿ ಕೊಶ ) ಬರುತ್ತಿರುವುದರಿಂದ, ನಿಮ್ಮ ಕಂಪ್ಯೂಟರ್ ಕಂಪನಿ ಹೊಸ ಬಯೋಸ್ ಅನ್ನು ಬಿಡುಗಡೆ ಮಾಡಿದ್ರೆ ಅದನ್ನು ನಿಮ್ಮ ಬಯೋಸ್ ಚಿಪ್ಪಿನಲ್ಲೂ ಅಪ್ ಡೇಟ್ (update) ಮಾಡಿಕೊಳ್ಳಲು ಸಾಧ್ಯವಿದೆ.ಇದರಿಂದ ಹಳೆ ಬಯೋಸ್ ನಲ್ಲಿರೋ ನ್ಯೂನ್ಯತೆಗಳನ್ನು ಸರಿಪಡಿಸಲು ಇಲ್ಲವೇ ಹೊಸ ಅಂಶಗಳನ್ನು ಸೇರಿಸಲು ಸಾಧ್ಯವಾಗುತ್ತಿದೆ. ಈ ಕ್ರಿಯೆ ನಿಮ್ಮ ಬಯೋಸ್ ನ ಆಯಸ್ಸನ್ನು ಹೆಚ್ಚಿಸಿ, ನಿಮ್ಮ ಹಾರ್ಡ್ವೇರ್ ಗಳು ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಇದೆಲ್ಲಾ ಸರಿ, ನಾವ್ಯಾಕೆ ಇದನ್ನೆಲ್ಲಾ ತಿಳ್ಕೋಬೇಕು ಅಂತೀರಾ? ಯಾವುದೇ ಆಪರೇಟಿಂಗ್ ಸಿಸ್ಟಂ ಇರಲಿ, ಅದು ಹೇಗೆ ಕೆಲಸ ಮಾಡ್ತದೆ ಅಂತ ಗೊತ್ತಿಲ್ಲದೇ ಇದ್ರೆ ಮುಂದೆ ಯಾವುದಾದರೊಂದು ತೊಂದರೆ ಬಂದಾಗ ಆ ತೊಂದರೆಯನ್ನು ನಿವಾರಿಸೋದು ಸಾಧ್ಯವಾಗಲ್ಲ. ಕೆಲ ಸಲ ವಿಂಡೋಸ್ ನಲ್ಲಿ ತೊಂದರೆಯಾದ್ರೆ ಅದನ್ನು ಸರಿಪಡಿಸುವುದರ ಬದಲು ಸಂಪೂರ್ಣವಾಗಿ ರೀಇನ್ಟಾಲ್ ಮಾಡಿರ್ಬೇಕಲ್ಲ ನಿಮ್ಮಲ್ಲಿ ಕೆಲವರು? ಇದು ನಿಮ್ಮ ಅಮೂಲ್ಯ ಫೈಲ್ ಗಳನ್ನು ಹಾಳು ಮಾಡಿರಬಹುದು. ಇದೇನಾದರೂ ಸರ್ವರ್ ಗಳಲ್ಲಿ ಆದರೆ ಏನಾಗಬಹುದು ಅಂತ ಒಮ್ಮೆ ಯೋಚಿಸಿ ನೋಡಿ. ಇದನ್ನು ತಪ್ಪಿಸಬೇಕಾದ್ರೆ ಬೂಟ್ ಪ್ರೊಸೆಸ್ ಇತ್ಯಾದಿಗಳ ಬಗ್ಗೆ ತಿಳಿದು ಕೊಳ್ಳೋದು ಮುಖ್ಯ. ಇದು ತುಂಬಾ ಸುಲಭ ಸಹ.ಮುಂದಿನ ಸಾಲುಗಳು ನಿಮಗೆ ಅದರ ಬಗ್ಗೆ ಹೆಚ್ಚಿನ ವಿಷಯವನ್ನು ತಿಳಿಸುತ್ತವೆ.

ಕಂಪ್ಯೂಟರನ್ನು ಆನ್ ಮಾಡಿದಾಗ ಅಥವಾ ರಿ-ಸೆಟ್ ಮಾಡಿದಾಗ, ಪ್ರೊಸೆಸರ್ ಒಂದು ನಿರ್ದಿಷ್ಟ ಮೆಮೋರಿ ಲೊಕೇಷನ್ ನಿಂದ ತಂತ್ರಾಂಶದ ಸಾಲುಗಳನ್ನು ಕಾರ್ಯಗತಗೊಳಿಸುತ್ತದೆ. ಪರ್ಸನಲ್ ಕಂಪ್ಯೂಟರಲ್ಲಿ ಇದು ಬಯೋಸ್ ನಲ್ಲಿರುತ್ತದೆ. ಪ್ರೊಸೆಸರ್ ನಲ್ಲಿರುವ CPU (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್) ಈ ಕಾರ್ಯಕ್ರಮವನ್ನು ಫ್ಲಾಷ್ / ROM ಚಿಪ್ ನ ಒಂದು ಮೆಮೋರಿ ಚಿಪ್ ನಿಂದ ಪಡೆದು ಕಾರ್ಯಗತಗೊಳಿಸುತ್ತದೆ.ಇದೆಲ್ಲಾ ಒಂದೇ ಫಲಿತಾಂಶವನ್ನು ನೀಡುತ್ತದೆ. ಒಟ್ಟಿನಲ್ಲಿ ಬಯೋಸ್ ಸಿಸ್ಟಂ ಬೂಟ್ ಆಗಲು ಬೇಕಿರುವ ಎಲ್ಲ ಹಾರ್ಡ್ವೆರ್ ಡಿವೈಸ್ ಗಳನ್ನ ಕಂಡುಕೊಳ್ಳಬೇಕು (ಬಯೋಸ್ ಹ್ಯಾಗೆ ಕಾರ್ಯನಿರ್ವಹಿಸುತ್ತದೆ ಅನ್ನುವುದು ಇನ್ನೂ ಕುತೂಹಲಕಾರಿ) ಹಾಗೂ ಯಾವ ಮಾಧ್ಯಮವನ್ನು (ಡಿವೈಸ್) ಬೂಟ್ ಮಾಡಬೇಕು (ಅಂದ್ರೆ ಎಲ್ಲಿ ನಿಮ್ಮ ಆಪರೇಟಿಂಗ್ ಸಿಸ್ಟಂ ಇದೆ) ಅನ್ನುವುದನ್ನು ತಿಳಿದುಕೊಳ್ಳಬೇಕು.

ಮೊದಲ ಹಂತದ ಬೂಟ್ ಲೋಡರ್

ಸರಿ, ಬಯೋಸ್ ಬೂಟ್ ಡಿವೈಸ್ ಕಂಡುಕೊಂಡದ್ದಾಯಿತು. ಈಗ ಮೊದಲ ಹಂತದ ಬೂಟ್ ಲೋಡರ್ ಅನ್ನು ಕಂಪ್ಯೂಟರಿನಲ್ಲಿರುವ ತಾತ್ಕಾಲಿಕ ಸ್ಮೃತಿ ಕೋಶ (RAM) ಮೆಮೋರಿಗೆ ಲೋಡ್ ಮಾಡಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಈ ಬೂಟ್ ಲೋಡರ್ ನಿಮ್ಮ ಹಾರ್ಡ್ ಡಿಸ್ಕ್ / USB ಡಿಸ್ಕ್, ಫ್ಲಾಪಿ ಡಿಸ್ಕ್ ಮುಂತಾದವುಗಳ ಮೊದಲ ಮೆಮೋರಿ ಲೊಕೇಷನ್ (MBR – Master Boot Record) ನಲ್ಲಿರುತ್ತದೆ. ಇದರ ಮುಖ್ಯ ಕೆಲಸ ನಿಮ್ಮ ಡಿಸ್ಕ್ ನಲ್ಲಿರೋ ಪಾರ್ಟೀಷನ್ ಗಳ ಮಾಹಿತಿಯನ್ನ ತನ್ನಲ್ಲಿಟ್ಟುಕೊಂಡು, ಯಾವ ಪಾರ್ಟೀಷನ್ ನಲ್ಲಿ ಎರಡನೇ ಹಂತದ ಬೂಟ್ ಲೋಡರ್ ಇದೆ ಅನ್ನೋದನ್ನು ತಿಳಿದು ಅದನ್ನ ಮೆಮೋರಿಗೆ ಲೋಡ್ ಮಾಡೋದು. MBR ನಲ್ಲಿ ೫೧೨ bytes ನಷ್ಟು ಮಾಹಿತಿಯನ್ನು ಮಾತ್ರ ಸಂಗ್ರಹಿಸಿಡಬಹುದು. ಆದರೆ ಇದರ ಪಾತ್ರ ಮಾತ್ರ ಬಹುಮುಖ್ಯ.

ಎರಡನೇ ಹಂತದ ಬೂಟ್ ಲೋಡರ್

ಎರಡನೇ ಹಂತದ ಬೂಟ್ ಲೋಡರ್ ಮೆಮೋರಿಗೆ ಲೋಡ್ ಆಗಿ ಕಾರ್ಯನಿರ್ವಹಿಸಲು ಶುರುಮಾಡಿದಾಗ ಅದು ನಿಮ್ಮ ಮುಂದೆ ಸ್ಲ್ಪಾಷ್ ಸ್ಕ್ರೀನ್ (Spalsh Screen)ಅನ್ನು ನಿಮ್ಮ ಮುಂದಿಡುತ್ತದೆ. ನಿಮ್ಮ ಕಂಪ್ಯೂಟರ್ ನಲ್ಲಿ ಲಿನಕ್ಸ್ ಇನ್ಸ್ಟಾಲ್ ಆಗಿದ್ದರೆ, GRUB ಅನ್ನೋ ತಂತ್ರಾಂಶದ ಸ್ಪ್ಲಾಷ್ ಸ್ಕ್ರೀನ್ ನಿಮ್ಮ ಮುಂದೆ ಲಿನಕ್ಸ್ ಮತ್ತು ಇತರೆ ಆಪರೇಟಿಂಗ್ ಸಿಸ್ಟಂಗಳನ್ನ ಆಯ್ಕೆಯನ್ನ ತೋರಿಸುತ್ತದೆ. ಕೆಳಗಿನ ಚಿತ್ರದಲ್ಲಿ ಅದನ್ನ ನೀಡಲಾಗಿದೆ.

GRUB ಎರಡನೇ ಹಂತದ ಬೂಟ್ ಲೋಡರ್

ಈ ಹಂತದಲ್ಲಿ ನೀವು ಬೂಟ್ ಆಗಬೇಕಿರುವವ ಗ್ನು/ಲಿನಕ್ಸ್ ಅನ್ನು ಆಯ್ಕೆ ಮಾಡಿಕೊಂಡಾಗ ಲಿನಕ್ಸ್ ಕರ್ನೆಲ್ ಇಮೇಜ್ ಮತ್ತು ಆಪ್ಶನಲ್ ಪ್ರಾರಂಭಿಕ RAM ಡಿಸ್ಕ್ (ಇದರಲ್ಲಿ ತಾತ್ಕಾಲಿಕ root ಫೈಲ್ ಸಿಸ್ಟಂ ಇರುತ್ತದೆ) ಅನ್ನು ನಿಮ್ಮ ಕಂಪ್ಯೂಟರಿನ ಮೆಮೋರಿಗೆ ಲೋಡ್ ಮಾಡಲಾಗುತ್ತದೆ. ಗ್ನು/ಲಿನಕ್ಸ್ ಹೃದಯ ಭಾಗ ಎನ್ನಬಹುದಾದ “ಕರ್ನೆಲ್” ಇಮೇಜ್ ಮೆಮೋರಿಗೆ ಲೋಡ್ ಆದ ನಂತರ ಗ್ರಬ್ (ಎರಡನೇ ಹಂತದ ಬೂಟ್ ಲೋಡರ್) ಬೂಟ್ ಪ್ರೊಸೆಸ್ ನ ನಿಯಂತ್ರಣವನ್ನು ಕರ್ನೆಲ್ ಇಮೇಜಿಗೆ ನೀಡುತ್ತದೆ. ಕಂಪ್ರೆಸ್ ಆಗಿದ್ದ ಕರ್ನೆಲ್ ಈ ಹಂತದಲ್ಲಿ ಡಿ-ಕಂಪ್ರೆಸ್ ಆಗಿ, ಮುಂದಿನ ಕಾರ್ಯಕ್ಕೆ ತನ್ನನ್ನು ತಾನು ಅಣಿ ಮಾಡಿಕೊಳ್ಳುತ್ತದೆ (Kernel Initialization Phase). ಈ ಹಂತದಲ್ಲಿ ಎರಡನೇ ಹಂತದ ಬೂಟ್ ಲೋಡರ್ ನಿಮ್ಮ ಸಿಸ್ಟಂನ ಹಾರ್ಡ್ವೇರ್ ಅನ್ನು ಎಣಿಸಿ, ಚೆಕ್ ಮಾಡುವುದರೊಂದಿಗೆ, root ಡಿವೈಸ್ ಅನ್ನು ಮೌಂಟ್ ಮಾಡುತ್ತದೆ (ಹಾರ್ಡಿಸ್ಕ್ ಅನ್ನು ಉಪಯೋಗಿಸಲಾಗುವಂತೆ ಅಣಿ ಮಾಡುವ ಕೆಲಸ mount) ಹಾಗು ಹಾರ್ಡ್ವೇರ್ ಗಳು ಕಾರ್ಯನಿರ್ವಹಿಸಲಿಕ್ಕೆ ಬೇಕಾದ ಕರ್ನೆಲ್ ಮಾಡ್ಯೂಲ್ ಗಳನ್ನು (ವಿಂಡೋಸ್ ಆಪರೇಟಿಂಗ್ ಸಿಸ್ಟಂ ನಲ್ಲಿ ಡ್ರೈವರ್ ಗಳಿವೆಯಲ್ಲ ಇವನ್ನು ಅದಕ್ಕೆ ಹೋಲಿಸಬಹುದು) ಮೆಮೋರಿಗೆ ಲೋಡ್ ಮಾಡಲಾಗುತ್ತದೆ.

ಲಾಗಿನ್ ಸ್ಕ್ರೀನ್

ಇದಾದ ನಂತರವೇ ಬಳಕೆದಾರನಿಗೆ ಬೇಕಾದ ಮೊದಲನೇ ಕಾರ್ಯಕ್ರಮ ಶುರುವಾಗುವುದು. ಇದೇ Init ಅಥವಾ user-space ಪ್ರೋಗ್ರಾಮ್. ಮುಂದೆ ಇನ್ನೂ ಕ್ಲಿಷ್ಟಕರವಾದ ಸಿಸ್ಟಂ ಪ್ರೊಗ್ರಾಮ್ ಗಳು ತಮ್ಮ ಕೆಲಸಕ್ಕೆ ಅಣಿಯಾಗುತ್ತವೆ. ಮತ್ತು ನಿಮಗೆ ಕಂಪ್ಯೂಟರ್ ಉಪಯೋಗಿಸಲು ಸಾಧ್ಯವಾಗುತ್ತವೆ. ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಲಾಗಿನ್ ಸ್ಕ್ರೀನ್ ಕಾಣಬಹುದು.

ಈಗ ಕಂಪ್ಯೂಟರ್ ಬಳಕೆದಾರನ ಪ್ರವೇಶಪದ (Login Name) ಹಾಗು ಗುಪ್ತಪದ(Password) ಬಳಸಿ ಲಾಗಿನ್ ಆಗಬಹುದು.

ಡೆಸ್ಕ್ ಟಾಪ್

ಲಾಗಿನ್ ಆದ ಬಳಿಕ ನಿಮ್ಮ ಕಂಪ್ಯೂಟರ್ ನ ಸ್ಕ್ರೀನ್ ಈ ಕೆಳಕಂಡಂತೆ ಕಾಣಿಸುತ್ತದೆ.

ಈಗ ನಿಮ್ಮ ಕಂಪ್ಯೂಟರಿನ ಮೌಸ್ ಬಳಸಿ ಡೆಸ್ಕ್ಟಾಪ್ ಮೇಲಿರುವ ಐಕಾನ್ ಗಳು, ಮೆನು ಇತ್ಯಾದಿಗಳನ್ನು ಕ್ಲಿಕ್ಕಿಸಿ ಅದರ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಬಹುದು. ಇವೇ ನಿಮ್ಮನ್ನು ಕಂಪ್ಯೂಟರಿನೊಂದಿಗೆ ವ್ಯವಹರಿಸಲು ಸಹಕರಿಸುವ ವ್ಯವಸ್ಥೆಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This