ಹೈಬರ್ನೇಟ್

ಕೆಲವು ಚಿಕ್ಕ ಚಿಕ್ಕ ವಿಷಯಗಳು ನಮಗೆ ತಿಳಿದಿದ್ದರೂ ಮನುಷ್ಯ ಸಹಜವಾದ ಮರೆವಿನಿಂದಾಗಿ ಸಮಯಕ್ಕೆ ಸರಿಯಾಗಿ ಉಪಯೋಗಕ್ಕೆ ಬರುವುದಿಲ್ಲ.

ಕಂಪ್ಯೂಟರ್ ಕೆಲ್ಸ ಮಾಡ್ತಾನೇ ಇರತ್ತೆ, ನಾವು ಮಾತ್ರ ಅಲ್ಲಿ ಇಲ್ಲಿ ಓಡಾಡ್ಕೋತ ಅದನ್ನು ಮರತೇ ಹೋಗೋದುಂಟು. ಕೆಲವು ಸಲ ಇದು ಅನಿವಾರ್ಯವಾಗಿದ್ದರೂ ಮತ್ತೆ ಕೆಲವು ಸಲ ಕೆಲಸದಲ್ಲಿರ ಬೇಕಾದರೆ ಪ್ರತಿನಿಮಿಷವೂ ಆನ್ಲೈನ್ ಇದ್ರೇನೆ ನಿನಗೆ ಸಂಬಳ ಅಂತಿದ್ರೆ ನೋಡಪ್ಪಾ ಕಂಪ್ಯೂಟರ್ ಈ ತರ ಕೆಲ್ಸ ನಿಲ್ಲಿಸದ ಹಾಗೆ ಓಡ್ತಾನೇ ಇರ್ಬೇಕು.

ಇದೆರಡನ್ನು ಪಕ್ಕಕ್ಕಿಟ್ಟು ಸ್ವಲ್ಪ ವಿದ್ಯುತ್ ಉಳಿಸೋಣ ಅಂತ ನಿಮ್ಮ ತಲೆಗೆ ಬಂದ್ರೆ ಮತ್ತೊಂದೆರಡು ಪ್ರಶ್ನೆಗಳು ನಮ್ಮ ಮುಂದಿರುತ್ತವೆ. ಕಂಪ್ಯೂಟರ್ ಅನ್ನು ಪೂರ್ಣವಾಗಿ ಸ್ಥಗಿತಗೊಳಿಸೋದಾ, ಇಲ್ಲ ತಾತ್ಕಾಲಿಕವಾಗಿ ಅದರ ಕೆಲಸಗಳನ್ನು ನಿಲ್ಲಿಸೋದಾ ಅಂತ.

ಈಗಾಗ್ಲೇ ಕಂಪ್ಯೂಟರಿನಲ್ಲಿ ಕಂಡು ಬರುವ ಕೆಲವು ಬಟನ್ನುಗಳನ್ನು ಗಮನಿಸಿದ್ದರೆ ಅಲ್ಲೇ hibernate/suspend ಅನ್ನೋ ಆಯ್ಕೆಗಳನ್ನು ನೋಡಿರಬೇಕಲ್ವೇ? ಇದು ಏನ್ಮಾಡುತ್ತೆ ಅಂತ ನಿಮಗೆ ಗೊತ್ತಿದೆಯಾ?

ಹೈಬರ್ನೇಟ್ ನಿಮ್ಮ ಕಂಪ್ಯೂಟರ್ನಲ್ಲಿ ನೆಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಯಥಾಸ್ಥಿತಿಯಲ್ಲಿ ಹಾರ್ಡ್ ಡಿಸ್ಕ್ ಗೆ ಸೇವ್ ಮಾಡಿಟ್ಟು ನಿಮ್ಮ ಕಂಪ್ಯೂಟರ್ ನಿದ್ರಾಸ್ಥಿತಿಯಲ್ಲಿರುವಂತೆ ಮಾಡುತ್ತದೆ. ಮತ್ತೆ ಕಂಪ್ಯೂಟರ್ ಅನ್ನು ಮರುಚಾಲನೆ ಮಾಡಿದಾಗ ಸೇವ್ ಆದ session ನಿಂದ ಮತ್ತೆ ಎಲ್ಲಾ ಕಾರ್ಯಕ್ರಮಗಳು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಹಾಗಿದ್ರೆ ಸಸ್ಪೆಂಡ್ ಗೇನು ಕೆಲಸ ಅಂತೀರಾ?

ಇದು ತಾತ್ಕಾಲಿಕವಾಗಿ ನಿಮ್ಮ ಕಂಪ್ಯೂಟರ್ ಅನ್ನು ಕಡಿಮೆ ವಿದ್ಯುತ್ ಉಪಯೋಗಿಸುವಂತೆ ಅಣಿಮಾಡುತ್ತದೆ. ವಿದ್ಯುತ್ ಸಂಪರ್ಕ ಕಡಿದರೆ ಮೆಮೋರಿ ಚಿಪ್ (RAM) ಚಿಪ್ ನಲ್ಲಿ ಶೇಖರಿಸಿಡುವ session ಇನ್ಪಾರ್ಮೇಷನ್ ಅಳಿಸಿ ಹೋಗುತ್ತದೆ ಮತ್ತು ನೀವು ಮೊದಲಿನಿಂದ ಎಲ್ಲಾ ಕಾರ್ಯಕ್ರಮಗಳನ್ನು ಶುರುಮಾಡಬೇಕು. ಇಲ್ಲಿ ನಿಮ್ಮ ಸಿಸ್ಟಂ ಪೂರ್ಣವಾಗಿ ನಿಶ್ಚಲವಾಗುವುದಿಲ್ಲ. ಮಾನೀಟರ್, ಹಾರ್ಡಿಸ್ಕ್ ಇತ್ಯಾದಿಗಳು ನಿಮ್ಮ ಮುಂದಿನ ಸಂಕೇತ ಬರುವವರೆಗೆ ನಿದ್ರಿಸುತ್ತಿರುತ್ತವೆ ಅಷ್ಟೇ. ನೀವು ಕೀಬೋರ್ಡ್ ನ ಕೀಲಿ ಕ್ಲಿಕ್ಕಿಸಿದರೆ ಮತ್ತೆ ನೀವು ಕಾರ್ಯೋನ್ಮುಖವಾಗಬಹುದು.

ನಾನು ನನ್ನ ಲ್ಯಾಪ್ಟಾಪ್ ಅನ್ನೇ ಮನೆಯಲ್ಲೂ ಮತ್ತು ಆಫೀಸಿನಲ್ಲೂ ಉಪಯೋಗಿಸುವುದರಿಂದ ಪ್ರತಿ ಭಾರಿ ಮತ್ತದೇ ತಂತ್ರಾಂಶಗಳನ್ನು ಓಪನ್ ಮಾಡ್ಬೇಕಾಗಿಲ್ಲ. ಮನೆಯಲ್ಲಿ ಕೆಲಸ ಮುಗಿದ ತಕ್ಷಣ ಲ್ಯಾಪ್ಟಾಪ್ ಮುಚ್ಚಿದರೆ ತಂತಾನೇ ಅದು ಹೈಬರ್ನೇಟ್ ಸ್ಥಿತಿಗೆ ಮರಳುತ್ತದೆ. ಅಫೀಸಿಗೆ ತಂದು ಮತ್ತೆ ಆನ್ ಮಾಡಿದರಾಯಿತು. ಕೆಲಸ ಮುಂದುವರೆಸ ಬಹುದು. ನಾನು ೩೦ ನಿಮಿಷಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡ್ಲಿಲ್ಲ ಅಂದಾಗ ಸಿಸ್ಟಂ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸೋದು ಬೇಡ ಅಂದಾಗ ಅದು ತನ್ನಂತಾನೇ suspend ಮಾಡಿಕೊಳ್ಳೋ ಹಾಗೂ ಮಾಡಬಹುದು.

ಇದಕ್ಕೆ ನಿಮ್ಮ ಕಂಪ್ಯೂಟರಿನಲ್ಲಿ ಕಾಣುವ ಬ್ಯಾಟರಿ ಅಥವಾ ಪವರ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ ಅದರ properties ಗೆ ನುಗ್ಗಿ. ಅಲ್ಲಿ ಪವರ್ ಮ್ಯಾನೇಜರ್ ನಲ್ಲಿ ಕಂಡು ಬರುವ ಕೆಲವು ವಿಷಯಗಳ ಮೇಲೆ ಕಣ್ಣಾಡಿಸಿದರೆ ನಿಮ್ಮ ಕೆಲಸ ಸುಲಭವಾಗುತ್ತೆ.

ನನ್ನ ಲ್ಯಾಪ್ಟಾಪ್ ನಲ್ಲಿ ವಿದ್ಯುತ್ ಉಪಯೋಗದ ಗ್ರಾಫ್ ಈ ಕೆಳಕಂಡಂತಿದೆ. ಎಷ್ಟು ಸಲ ಹೈಬರ್ನೇಟ್ ಆಗಿದೆ ಅಂತ ಕೂಡ ನೀವು ಕಾಣಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This