ಉಬುಂಟು: ಹಿಂದೆ – ಮುಂದೆ

ಇದೇನಿದು ಉಬುಂಟು?

ಕಂಪ್ಯೂಟರ್ ಕೊಂಡ ತಕ್ಷಣ ಅದನ್ನು ಕೆಲಸ ಮಾಡ್ಲಿಕ್ಕೆ ಬೇಕಾದ ಮುಖ್ಯ ತಂತ್ರಾಂಶ ಅಥವಾ ಆಪರೇಟಿಂಗ್ ಸಿಸ್ಟಂ ಒಂದು ಬೇಕಲ್ವಾ? ಹಾ! ನಮ್ಮ ಪಕ್ಕದ ಮನೆ ಹುಡುಗ ಇದಾನಲ್ಲ ಅವನನ್ನ ಕೇಳಿದ್ರೆ ಆಯ್ತು ಹಾಕಿ ಕೊಡ್ತಾನೆ ಬಿಡು ಅದಕ್ಕೆಲ್ಲಾ ಯಾಕೆ ತಲೆಕೆಡಿಸಿಕೊಳ್ತೀಯಾ? ಇದು ಮನೆಗೆ ಕಂಪ್ಯೂಟರ್ ತಂದ ಎಲ್ಲರ ನಡುವೆ ನೆಡೆಯುವ ಸಾಮಾನ್ಯ ಸಂಭಾಷಣೆ. ಕಂಪ್ಯೂಟರ್ ಬಗ್ಗೆ ಅಷ್ಟು ಇಷ್ಟು ತಿಳಿದವರು ತಕ್ಷಣ ಅವರಿಗೆ ತಮ್ಮಲ್ಲಿರುವ ಮೈಕ್ರೋಸಾಫ್ಟ್ ವಿಂಡೋಸ್ ಇನ್ಸ್ಟಾಲ್ ಮಾಡಿಕೊಡೋದು ಕೂಡ ಈಗೊಂದು ಸಂಪ್ರದಾಯದಂತೆಯೇ ಆಗಿದೆ. ಆದ್ರೆ ಒಂದು ವಿಷಯ ಯೋಚಿಸಿದಿರಾ? ನೀವಿಲ್ಲಿ ತಪ್ಪು ಮಾಡುತ್ತಿದ್ದೀರಿ.. ಪೈರಸಿ ಭೂತದ ಬಲೆಗೆ ಬೀಳುತ್ತಿದ್ದೀರಿ. ಇದು ಕಾನೂನು ರೀತ್ಯಾ ಅಪರಾಧ ಕೂಡ. ಏಕಂದರೆ, ವಿಂಡೂಸ್ ಆಪರೇಟಿಂಗ್ ಸಿಸ್ಟಂ ಅನ್ನು ಕಾಸುಕೊಟ್ಟು ಕೊಳ್ಳದೆ ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವಂತಿಲ್ಲ. ಹಾಗೆಯೇ ಇದೊಂದನ್ನು ಕೊಂಡರೆ ನಿಮಗೆ ದಿನ ನಿತ್ಯ ಇತರೆ ಕೆಲಸಗಳಿಗೆ ಬೇಕಾಗುವ ತಂತ್ರಾಂಶಗಳಿಗೆ ಮತ್ತೆ ದುಡ್ಡು ತೆರಬೇಕು. ಹೀಗೆ ಪ್ರೊಪ್ರೈಟರಿ ಸಾಪ್ಟ್ವೆರುಗಳ ಹಣದಾಹಕ್ಕೆ ನೀವು ಬಲಿಯಾಗುತ್ತಲೇ ಹೋಗುತ್ತೀರಿ. ಇದಕ್ಕೆಲ್ಲ ಉತ್ತರ ಸ್ವತಂತ್ರ ಹಾಗು ಮುಕ್ತ ತಂತ್ರಾಂಶಗಳನ್ನು (Free and OpenSource) ಬಳಸುವುದು. ಗ್ನು/ಲಿನಕ್ಸ್ ಆಧಾರಿತ ಡೆಬಿಯನ್ ಆಪರೇಟಿಂಗ್ ಸಿಸ್ಟಂನ ಮೂಲವಾಗಿರಿಸಿಕೊಂಡು ಅಭಿವೃದ್ದಿ ಪಡಿಸಲಾಗಿರುವ, ಸ್ವತಂತ್ರ ತಂತ್ರಾಂಶದ ಸ್ವಾತಂತ್ರ್ಯದ ಸವಿಯನ್ನು ಪ್ರಪಂಚದೆಲ್ಲೆಡೆ ಎಲ್ಲ ಕಂಪ್ಯೂಟರ್ ಬಳಕೆದಾರರಿಗೂ ಹಂಚುವುದಕ್ಕೆಂದೇ ಇರುವ ಉಬುಂಟು ಇಂಥದ್ದೊಂದು ತಂತ್ರಾಂಶ. ಎಲ್ಲರ ಒಳಿತಿಗೆ ಬೇಕಾದ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿ ಅದನ್ನು ಬಳಸುವಂತೆ ಮಾಡಬೇಕೆಂಬ ಸಮಾನ ಮನಸ್ಕ ಸ್ವತಂತ್ರ ತಂತ್ರಾಂಶ ಸಮುದಾಯದ ಬೆಂಬಲ ಉಬುಂಟುವಿಗಿದ್ದರೆ ಅದರ ಮೂಲ ಹರಿಕಾರ ಸೌತ್ ಆಫ್ರಿಕಾ ಮೂಲದ, ಲಂಡನ್ ನಿವಾಸಿ ಮಾರ್ಕ್ ಶಟಲ್ ವರ್ಥ್ (Mark Shuttle Worth). ಉಬುಂಟು ವೆಬ್ಸೈಟ್ (ubuntu.com) ಅಥವಾ ಸಿ.ಡಿ ಯ ಮೇಲೆ ಕಾಣುವ ಚಿನ್ಹೆ ಕೂಡ “ಮಾನವೀಯತೆಯನ್ನು” ಸಾರುತ್ತದೆ (humanity to others).

ಉಬುಂಟುವನ್ನು ಪುಕ್ಕಟೆಯಾಗಿ ಡೌನ್ಲೋಡ್ ಮಾಡಿಕೊಂಡು, ಉಪಯೋಗಿಸಿ, ಕಾಪಿ ಮಾಡಿ, ತಿಳಿದುಕೊಂಡು, ಇತರರಿಗೂ ಹಂಚಿ, ಅದರಲ್ಲಿನ ಮೂಲ ತಂತ್ರಾಂಶವನ್ನು ಬದಲಿಸಿ, ಅಭಿವೃದ್ದಿಪಡಿಸಿ ಅದೂ ಯಾವುದೇ ಲೈಸೆನ್ಸ್ ಅಥವಾ ಪರವಾನಗಿಗೆ ಹಣ ತೆತ್ತದೆ. ಇದೆಲ್ಲದರ ಜೊತೆಗೆ ನಿಮ್ಮ ಭಾಷೆಯಲ್ಲೇ ತಂತ್ರಾಂಶವನ್ನು ಬಳಸುವ ಅವಕಾಶ ಕೂಡ ನಿಮಗೆ ಉಬುಂಟು ಒದಗಿಸುತ್ತದೆ. ಇದನ್ನು ಯಾರು ಬೇಕಾದರೂ ಸುಲಭವಾಗಿ ಬಳಸಬಹುದು ಕೂಡ. ವಿಕಲ ಚೇತನರಿಗೂ ಕೂಡ ಉಪಯೋಗವಾಗುವಂತಹ ಅನೇಕ ತಂತ್ರಾಂಶ ಸವಲತ್ತುಗಳನ್ನು ಉಬುಂಟು ತನ್ನಲ್ಲಿರಿಸಿಕೊಂಡಿದೆ. ಇದು ಉಬುಂಟುವಿನ ಮುಖ್ಯ ಗುರಿ ಕೂಡ. ಪ್ರತಿ ಆರು ತಿಂಗಳಿಗೊಮ್ಮೆ ಹೊಸದಾದ, ಉತ್ತಮ ಮತ್ತು ಸ್ಥಿರವಾದ ಆಪರೇಟಿಂಗ್ ಸಿಸ್ಟಂ ಅನ್ನು ಹೊತ್ತು ತರುವುದರ ಜೊತೆಗೆ, ತಂತ್ರಾಂಶದ ಉಪಯುಕ್ತತೆ, ಅದರ ಬಳಕೆಯ ವಿಧಾನ, ಇನ್ಸ್ಟಾಲೇಶನ್ ಇತ್ಯಾದಿಗಳ ಸರಳೀಕರಣದ ಕಡೆಗೂ ಹೆಚ್ಚಿನ ಗಮನವನ್ನೂ ಹರಿಸುತ್ತದೆ. ೨೦೦೪ ರಲ್ಲಿ ಪ್ರಾರಂಭವಾದ ಈ ಯೋಜನೆ ಇವತ್ತಿಗೂ ಗ್ನು/ಲಿನಕ್ಸ್ ಡೆಸ್ಕ್ಟಾಪ್ ಬಳಕೆದಾರರಿಗೆ ಬಹಳ ಅಚ್ಚುಮೆಚ್ಚು.

ಅಂತರ್ಜಾಲ ಯುಗದಲ್ಲಿರುವ ನಾವು ಪ್ರತಿ ಗಳಿಗೆಯೂ ಬಳಸುವ ಕಂಪ್ಯೂಟರ್ಗಳು, ಲ್ಯಾಪ್ಟಾಪ್ ಗಳು, ಇಂಟರ್ನೆಟ್ ಸರ್ವರ್ , ಮೊಬೈಲ್ ಹಾಗೂ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ನೆಟ್ ಬುಕ್ ಇತ್ಯಾದಿಗಳು ಕೂಡ ಈಗ ಉಬುಂಟುವನ್ನು ತಮ್ಮ ಮೂಲ ತಂತ್ರಾಂಶವಾಗಿ ಬಳಸುತ್ತಲಿವೆ. ಕಂಪ್ಯೂಟರಿನಲ್ಲಿರುವ ಎಲ್ಲ ರೀತಿಯ ಇತ್ತೀಚಿನವರೆಗೆ ಲಭ್ಯವಿರುವ ಸಿ.ಪಿ.ಯು, ಮೌಸ್, ಮಾನಿಟರ್, ಕೀ-ಬೋರ್ಡ್ ಹೀಗೆ ಹತ್ತು ಹಲವು ಹಾರ್ಡ್ವೇರ್ ಭಾಗಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ಸಮುದಾಯವೇ ಸಿದ್ದಪಡಿಸಿರುವ ಗ್ನು/ಲಿನಕ್ಸ್ ಆಧಾರಿತ ತಂತ್ರಾಂಶವಾದ ಉಬುಂಟು ಮೇಲೆ ಹೇಳಿದಂತೆ ಯಾವ ವಿಧವಾದ ಕಂಪ್ಯೂಟರ್ನಲ್ಲೂ ಕೆಲಸ ಮಾಡಬಲ್ಲದು.

ಮಾರ್ಕ್ ಶಟಲ್ ವರ್ಥ್

ಮಾರ್ಕ್ ಶಟಲ್ ವರ್ಥ್ – ಚಿತ್ರ: ವಿಕಿಪೀಡಿಯಾ

ಉಬುಂಟು ಬಗೆಗೆ ಹೇಳುವಾಗ ಮಾರ್ಕ್ ಶಟಲ್ ವರ್ಥ್ ಬಗ್ಗೆ ಹೇಳಲೇ ಬೇಕು.. ಪ್ರತಿಭಾನ್ವಿತನಾದ ಈತ ಮೂಲತ: ಸೌತ್ ಆಫ್ರಿಕಾದ, ಅರೇಂಜ್ ಫ್ರೀ ಸ್ಟೇಟ್ ನ ವೆಲ್ಕಮ್ ನವನು. ಕೇಪ್ ಟೌನ್ ವಿಶ್ವವಿದ್ಯಾಲಯದಲ್ಲಿ ಫೈನಾನ್ಸ್ ಮತ್ತು ಇನ್ಫಾರ್ಮೇಷನ್ ಸಿಸ್ಟಂ ವಿಷಯದಲ್ಲಿ ಉನ್ನತ ವಿದ್ಯಾಭ್ಯಾಸ ಮುಗಿಸಿದ. ಇದೇ ಯುನಿವರ್ಸಿಟಿಯಲ್ಲಿ ಮೊದಲ ಸಾರ್ವಜನಿಕ ಇಂಟರ್ನೆಟ್ ಕನೆಕ್ಷನ್ ಅಳವಡಿಸಿದ ಮೊದಲಿಗರಲ್ಲಿ ಇವನೂ ಒಬ್ಬ. ತಾನು ೧೯೯೫ ರಲ್ಲಿ ಕಟ್ಟಿದ ಇನ್ಪಾರ್ಮೇಶನ್ ಸೆಕ್ಯುರಿಟಿ ಕಂಪನಿ ಥ್ವಾಟೆ (Thawte) ಯನ್ನು ವೆರಿಸೈನ್ ಎಂಬ ದೈತ್ಯ ಕಂಪನಿಗೆ ೫೭೫ ಮಿಲಿಯನ್ ಡಾಲರುಗಳಿಗೆ ಮಾರಿದ ಈತ ಆನಂತರ ಮಾಡಿದ ಮೊದಲ ಕೆಲಸವೆಂದರೆ ಹವ್ಯಾಸಿ ಅಂತರಿಕ್ಷ ಪ್ರವಾಸಿಗನಾಗಿ ಬಾಹ್ಯಾಕಾಶ ಪ್ರವಾಸ. ನಂತರ ಸೆಪ್ಟೆಂಬರ್ ೨೦೦೦ ದಲ್ಲಿ ಎಚ್.ಬಿ.ಡಿ ವೆಂಚರ್ ಕ್ಯಾಪಿಟಲ್ ಪ್ರಾರಂಭಿಸಿದ ಈತ ಮುಂದೆ ಮಾರ್ಚ್ ೨೦೦೪ ರಲ್ಲಿ ಸ್ವತಂತ್ರ ತಂತ್ರಾಂಶಗಳಿಗೆ ಬೆಂಬಲವನ್ನೂ ಹಾಗು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಬೇಕಾದ ಸಲಹೆ ಸೂಚನೆಗಳನ್ನು ನೀಡುವ ಕಂಪೆನಿ ಕೆನಾನಿಕಲ್ ಲಿಮಿಟೆಡ್ (Canonical Ltd.) ಸ್ಥಾಪಿಸಿದ. ಇದೇ ಕಂಪೆನಿ ಮುಂದೆ ಉಬುಂಟುವಿನ ಮತ್ತದರ ಸುತ್ತಲಿನ ಸ್ವತಂತ್ರ ತಂತ್ರಾಂಶ ಸಮುದಾಯಕ್ಕೆ ಬೆಂಬಲವಾಗಿ ನಿಂತಿತು. ಮಾರ್ಕ್ ಸ್ಥಾಪಿಸಿದ ಉಬುಂಟು ಫೌಂಡೇಶನ್, ಉಬುಂಟುವಿನ ಉಳಿವಿನ ಬಗ್ಗೆ, ಅದರ ಬೆಳವಣಿಗೆ ಇತ್ಯಾದಿಗಳ ಹೊಣೆಯನ್ನು ಹೊತ್ತಿಕೊಂಡಿರುವ ಸಂಸ್ಥೆಯಾಗಿದೆ. ಅದಕ್ಕೆ ೧೦ ಮಿಲಿಯನ್ ಡಾಲರುಗಳ ಕಾಣಿಕೆಯನ್ನೂ ಮಾರ್ಕ್ ನೀಡಿದ್ದು, ಕೆನಾನಿಕಲ್ ಕಂಪನಿ ಇಲ್ಲದಿದ್ದರೂ ಎಂದೆಂದಿಗೂ ಉಬುಂಟು ಎಲ್ಲರಿಗೆ ದೊರೆಯುವುದು ಮುಂದುವರೆಯಬೇಕು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ.

ಉಬುಂಟುವಿನ ಉಪಯೋಗಗಳು:-

ಕಂಪ್ಯೂಟರ್ ಮುಂದೆ ದಿನಗಟ್ಟಲೆ ಕಾಲ ಕೆಳೆಯುವ ನಮಗೆ ಇಂಟರ್ನೆಟ್ ಬಳಕೆಗೆ ಬೇಕಿರುವ ವೆಬ್ ಬ್ರೌಸರ್, ಅಫೀಸಿನ ಕೆಲಸಗಳಿಗೆ ಬೇಕಿರುವ ಪ್ರೆಸೆಂಟೇಶನ್, ಕಡತಗಳು, ಲೆಕ್ಕ ಇತ್ಯಾದಿಗಳನ್ನು ಮಾಡಲು ಬೇಕಿರುವ ಸ್ಪ್ರೆಡ್ ಶೀಟ್, ಸಂಪರ್ಕ ಸಾಧನಗಳಲ್ಲಿ ಮೊಬೈಲ್ ಇತ್ಯಾದಿಗಳನ್ನೂ ಹಿಂದಿಕ್ಕುತ್ತಿರುವ ಇನ್ಸಟಂಟ್ ಮೆಸೇಜಿಂಗ್ ಅಥವಾ ಚಾಟಿಂಗ್, ಈ-ಮೈಲ್, ದೃಶ್ಯ-ಶ್ರಾವ್ಯ ಇತ್ಯಾದಿ ಮನರಂಜನೆಗೆ, ವಿದ್ಯಾಭ್ಯಾಸಕ್ಕೆ, ತಂತ್ರಾಂಶ ಅಭಿವೃದ್ದಿಗೆ ಹೀಗೆ ಹತ್ತು ಹಲವು ಕೆಲಸಗಳಿಗೆ ಬೇಕಿರುವ ತಂತ್ರಾಂಶಗಳನ್ನು ಉಬುಂಟು ತನ್ನಲ್ಲಡಗಿಸಿ ಕೊಂಡಿದೆ. ಇದಾಗ್ಯೂ ಈ ತಂತ್ರಾಂಶವನ್ನು ಬಳಸಲಿಕ್ಕೆ ನೀವು ಯಾವುದೇ ಹಣ ಕೊಡಬೇಕಿಲ್ಲ. ಇದನ್ನು ಸುಲಭವಾಗಿ ಉಬುಂಟು ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಹತ್ತು ಹಲವರ ಜೊತೆ ಹಂಚಿಕೊಳ್ಳಬಹುದೂ ಕೂಡ.

ಗ್ನು/ಲಿನಕ್ಸ್ ನಿಮಗೆ ಮೇಲೆ ಸ್ವತಂತ್ರ ತಂತ್ರಾಂಶಗಳನ್ನು ಹೊತ್ತು ತರುವುದರ ಜೊತೆಗೆ, ವೈರಸ್ ಮುಕ್ತ ಕಂಪ್ಯೂಟಿಂಗ್ ಅನುಭವವನ್ನು ನಿಮಗೆ ಕೊಡುತ್ತದೆ. ಇಂಟರ್ನೆಟ್ ನಲ್ಲಿ ವ್ಯವಹರಿಸುವುದು ಬಹುತೇಕ ಸಾಮಾನ್ಯವಾಗಿರುವಾಗ ನಿಮ್ಮ ಡೆಟಾ ಸೆಕ್ಯೂರಿಟಿ, ನಿಮ್ಮ ಪರಿಚಯವನ್ನು ಗುಟ್ಟಾಗಿಟ್ಟು, ಐಡೆಂಟಿಟಿ ಥೆಫ್ಟ್ (ಗುರುತು ಪರಿಚಯದ ಕಳ್ಳತನ), ಸ್ಪ್ಯಾಮಿಂಗ್(spamming) (ಬೇಡದ ವೆಬ್ಸೈಟ್ ಗಳಿಂದ ಮೈಲುಗಳ ಸುರಿಮಳೆಯಾಗುವುದು), ಸ್ಪೂಫಿಂಗ್ (ನಿಮ್ಮ ಹೆಸರಿನಲ್ಲಿ ಗೊತ್ತು ದಿಸೆಯಿಲ್ಲದವರಿಗೆ ನಿಮ್ಮ ಮೈಲ್ ಬಾಕ್ಸ್ ನಿಂದ ಮೈಲುಗಳನ್ನು ಕಳಿಸುವುದು) ಇವೆಲ್ಲವುಗಳಿಂದ ಸುಲಭವಾಗಿ ದೂರವಿಡಲು ಗ್ನು/ಲಿನಕ್ಸ್ ತಂತ್ರಾಂಶ ನಿಮಗೆ ಸಹಕಾರಿಯಾಗುತ್ತವೆ. ಉಬುಂಟು ಸುಲಭವಾಗಿ ಇನ್ಸ್ಟಾಲ್ ಮಾಡಿ ಉಪಯೋಗಿಸಬಹುದಂತಾದ ಸ್ವತಂತ್ರ ತಂತ್ರಾಂಶ.

ಕಂಪ್ಯೂಟರ್ ಗೇಮ್ ಗಳು ಇತ್ಯಾದಿಗಳ ಬಗ್ಗೆ ಆಸಕ್ತಿ ಇದ್ದಲ್ಲಿ, ಗ್ರಾಫಿಕ್ಸ್ ಕಾರ್ಡಿನ ಸಂಪೂರ್ಣ ಉಪಯೋಗ ಪಡೆಯ ಬೇಕಿದ್ದರೆ ಉಬುಂಟು ಆ ಅವಕಾಶವನ್ನೂ ನಿಮಗೆ ಕೊಡುತ್ತದೆ. nVidia ಇತ್ಯಾದಿ ಗ್ರಾಫಿಕ್ಸ್ ಕಾರ್ಡುಗಳೂ ಸಹ ಸುಲಭವಾಗಿ ಉಬುಂಟುವಿನಲ್ಲಿ ಗುರುತಿಸಲ್ಪಡುತ್ತವೆ. ಕಲಾಕಾರರಿಗೆ ಬೇಕಿರುವ ಟ್ಯಾಬ್ಲೆಟ್ ಬಳಕೆ ಕೂಡ ಸುಲಭ.. ಈಗಾಗಲೇ ಇರುವ ವಿಂಡೋಸ್ ಫೈಲುಗಳನ್ನು, ಪಾರ್ಟೀಷನುಗಳನ್ನೂ ಉಬುಂಟುವಿನ ಮೂಲಕ ಸುಲಭವಾಗಿ ಉಪಯೋಗಿಸಿಕೊಳ್ಳಬಹುದು.

ಉಬುಂಟು ಹೇಗೆ?

ಉಬುಂಟು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡೋ ಇಲ್ಲವೇ ಅವರ ವೆಬ್ಸೈಟ್ ನಿಂದ ತರಿಸಿಕೊಂಡ ಸಿ.ಡಿ ಕಂಪ್ಯೂಟರ್ ಬಳಸಲು ಬೇಕಿರುವ ಎಲ್ಲ ತಂತ್ರಾಂಶಗಳನ್ನೂ ಹೊಂದಿರುತ್ತದೆ. ಅದಕ್ಕಿಂತ ಹೆಚ್ಚಿನ ತಂತ್ರಾಂಶಗಳು ನಿಮಗೆ ಬೇಕಿದ್ದಲ್ಲಿ ಅವನ್ನು ಸುಲಭವಾಗಿ ಇಂಟರ್ನೆಟ್ ನಿಂದ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಉಬುಂಟುವನ್ನು ಇನ್ಸ್ಟಾಲ್ ಮಾಡುವುದೂ ಕೂಡ ತುಂಬಾ ಸುಲಭ. ಸಿ.ಡಿ ಬೂಟ್ ಮಾಡಿದ ತಕ್ಷಣ ನಮ್ಮ ಕಣ್ಮುಂದೆ ಗೋಚರಿಸುವ ಸಂದೇಶಗಳನ್ನು ಓದುತ್ತಲೇ ೧೫ ರಿಂದ ೨೦ ನಿಮಿಷಗಳಲ್ಲಿ ಸುಲಭವಾಗಿ ಇದನ್ನು ನಿಮ್ಮ ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇನ್ಸ್ಟಾಲ್ ಮಾಡಿದೊಡನೆಯೇ ನಿಮ್ಮ ಕಂಪ್ಯೂಟರ್ ಬಳಕೆಗೆ ಸಿದ್ದವಾಗಿರುತ್ತದೆ. ಪ್ರತಿನಿತ್ಯದ ಕೆಲಸದ ಜೊತೆಗೆ, ಗ್ರಾಫಿಕ್ಸ್, ಮನರಂಜನೆ, ಇಂಟರ್ನೆಟ್, ಆಟಗಳು ಹೀಗೆ ಹತ್ತು ಹಲವು ತಂತ್ರಾಂಶಗಳು ನಿಮ್ಮ ಕಂಪ್ಯೂಟರ್ ತೆರೆಯ ಮೇಲೆ ಪ್ರತ್ಯಕ್ಷ. ಡ್ರೈವರ್ ಇತ್ಯಾದಿಗಳನ್ನು ಬಳಸುವ ಅಗತ್ಯವಿಲ್ಲ. ಇನ್ನೊಂದು ವಿಷಯ ಬೇಕಿದ್ದಲ್ಲಿ ವಿಂಡೋಸ್ ಮೇಲೆಯೇ ಉಬುಂಟುವನ್ನು ಕೂಡ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಉಬುಂಟು ಹೇಗಿರುತ್ತೆ ಅಂತ ಸಂದೇಹವಿರುವವರಿಗೆ ಇದು ಉತ್ತರ.

ಉಬುಂಟುವಿನಲ್ಲಿ ಕನ್ನಡ?

ಹೌದು, ಕನ್ನಡ ಓದುವುದು, ಬರೆಯುವುದು, ಈ-ಮೈಲ್ ಚಾಟ್ಗಳಲ್ಲಿ ವ್ಯವಹರಿಸುವುದು ಕೂಡ ಅತ್ಯಂತ ಸುಲಭ. ಬರಹ, ನುಡಿ ಯಂತೆ ಕೆಲಸ ಮಾಡುವ ಕೀಬೋರ್ಡ್ ಲೇಔಟ್ ಗಳು SCIM ಎಂಬ ತಂತ್ರಾಂಶದೊಂದಿಗೆ ನಿಮಗೆ ದೊರೆಯುತ್ತವೆ. ಇದೆಲ್ಲದರ ಜೊತೆಗೆ ಇಡೀ ಉಬುಂಟು ಗ್ನು/ಲಿನಕ್ಸ್ ನ ಮೆನು ಇತ್ಯಾದಿಗಳನ್ನು ಕೂಡ ಕನ್ನಡ ಲ್ಯಾಂಗ್ವೇಜ್ ಪ್ಯಾಕ್ ಬಳಸಿ ಕನ್ನಡದಲ್ಲೇ ಬಳಸಬಹುದು. ಸಾಮಾನ್ಯವಾಗಿ ಬಳಸುವ ಅನೇಕ ತಂತ್ರಾಂಶಗಳ ಕನ್ನಡ ಅನುವಾದ ಈಗಾಗಲೇ ಲಭ್ಯವಿರುವುದರಿಂದ ಇದು ಸಾಧ್ಯವಾಗಿದೆ. ನೀವು ಓದುತ್ತಿರುವ ಈ ಲೇಖನ ಬರೆದಿರೋದು ಕೂಡ ಉಬುಂಟುವಿನಲ್ಲಿಯೇ.

ಉಬುಂಟು ಅಪ್ಡೇಟ್ ಮಾಡಿಕೊಳ್ಳೋದು?

ಪ್ರತಿ ಆರು ತಿಂಗಳಿಗೊಮ್ಮೆ ಹೊರಬರುವ ಉಬುಂಟುವಿನ ಹೊಸ ಆವೃತ್ತಿ ನಿಮಗೆ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶದ ಪ್ರಪಂಚದಲ್ಲಿ ಕಂಡುಬರುವ ಅನೇಕ ತಂತ್ರಾಂಶಗಳನ್ನು ನಿಮಗೆ ಹೊತ್ತು ತರುತ್ತದೆ. ತನ್ನ ಬಳಕೆದಾರರ ಕಂಪ್ಯೂಟರಿನಲ್ಲಿರುವ ಮಾಹಿತಿಯ ಸುರಕ್ಷತೆಯ ಬಗ್ಗೆ ಕಾಳಜಿವಹಿಸುವ ಉಬುಂಟು ಹದಿನೆಂಟು ತಿಂಗಳ ಮಟ್ಟಿಗೆ ಡೆಕ್ಸ್ ಟಾಪ್ ಮತ್ತು ಸರ್ವರ್ ಎರಡೂ ಆವೃತ್ತಿಗಳಿಗೂ ಉಚಿತ ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಕೊಡುತ್ತದೆ. LTS ಅಥವಾ ಧೀರ್ಘ ಕಾಲದ ಸಪೋರ್ಟ್ ಆವೃತ್ತಿ ಪಡೆದಿರುವ ಉಬುಂಟುವಿನ ಡೆಸ್ಕ್ ಟಾಪ್ ತಂತ್ರಾಂಶಕ್ಕೆ ಮೂರು ವರ್ಷಗಳವರೆಗೂ, ಸರ್ವರ್ ತಂತ್ರಾಂಶಕ್ಕೆ ಐದು ವರುಷಗಳವರೆಗೂ ಈ ಅಪ್ಡೇಟುಗಳು ಲಭ್ಯವಿರುತ್ತದೆ. ಎಲ್.ಟಿ.ಎಸ್ ಆವೃತ್ತಿಗೆ ನೀವೇನೂ ಹೆಚ್ಚಿನ ಹಣವನ್ನು ಕೊಡಬೇಕಿಲ್ಲ. ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು.

ಉಬುಂಟು ಸಮರ್ಥ ತಂತ್ರಾಂಶ ಹೇಗೆ?

ಇದೆಲ್ಲವನ್ನೂ ಉಬುಂಟು ಎಲ್ಲರಿಗೆ ಮುಟ್ಟಿಸಲಿಕ್ಕೆ ಹೇಗೆ ಸಾಧ್ಯವಾಗ್ತಿದೆ ಅಂತೀರಾ? ಕೆನಾನಿಕಲ್ ತಂಡ ಹಾಗು ತಂತ್ರಾಂಶಗಳು ಸ್ವತಂತ್ರ ತಂತ್ರಾಂಶ ಸಮುದಾಯದಲ್ಲಿ ತಮ್ಮ ಬೇರನ್ನು ಹೊಂದಿದ್ದು ಕಾಲಾನುಕಾಲಕ್ಕೆ ಒಳ್ಳೆಯ ಅಭಿಪ್ರಾಯವನ್ನೇ ಜನರ ಮನಸ್ಸಿನಲ್ಲಿ ಉಳಿಸಿಕೊಂಡು ಬಂದಿದೆ. Gnome, Linux, Debian, Bazaar ಹೀಗೆ ಹತ್ತು ಹಲವು ಓಪನ್ ಸೋರ್ಸ್ ಪ್ರಾಜೆಕ್ಟುಗಳ ಮುಖ್ಯ ತಂತ್ರಜ್ಞಾನ ಪರಿಣಿತರೂ ಕೆನಾನಿಕಲ್ ಗೆ ಉತ್ತಮ ಕೊಡುಗೆಯನ್ನು ನೀಡುತ್ತ ಅದರ ಸುಧೀರ್ಘ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದೆಲ್ಲದರ ಜೊತೆ ಪ್ರಪಂಚದಾದ್ಯಂತ ಹಗಲಿರುಳೆನ್ನದೆ ಯಾವ ಸಮಯದಲ್ಲಾದರೂ ಸಹಾಯ ಉಬುಂಟು ಬಳಕೆದಾರರಿಗೆ ಸಿಗುತ್ತದೆ. ಉಬುಂಟು ಫೋರಂ ಮತ್ತು ಐ.ಆರ್.ಸಿ ಚಾನೆಲ್ ಗಳು ಉಚಿತ ಸಲಹೆ ಸೂಚನೆಗಳನ್ನು, ವಿಶ್ವದಾಧ್ಯಂತ ಇರುವ ಇತರೆ ಉಬುಂಟು ಅಭಿಮಾನಿಗಳ ಮೂಲಕ ದೊರೆಯುವಂತೆ ಮಾಡಿವೆ. ಹಾಗೆ, ಉಬುಂಟುವಿನಲ್ಲಿ ಕಂಡುಬರುವ ತೊಂದರೆಗಳನ್ನು ಫೋರಂ, ಐ.ಆರ್.ಸಿ ಅಥವಾ ತೊಂದರೆಗಳನ್ನು ಕ್ರೂಡೀಕರಿಸಲೆಂದೇ ಮಾಡಿರುವ launchpad.net ನಲ್ಲಿ ತಿಳಿಸಿ ಬಹುಬೇಗ ಉತ್ತರಗಳನ್ನು ಕಂಡುಕೊಳ್ಳ ಬಹುದಾಗಿದೆ. ನೀವೂ ತಂತ್ರಾಂಶ ಪ್ರವೀಣರೆ? ಹಾಗಿದ್ದಲ್ಲಿ ನೀವೇ ತೊಂದರೆಯನ್ನೊಮ್ಮೆ ಸರಿಪಡಿಸಲಿಕ್ಕೆ ಪ್ರಯತ್ನಿಸಬಹುದು ಏಕೆ ಹೇಳಿ? – ಹೌದು ಸ್ವತಂತ್ರ ಹಾಗೂ ಮುಕ್ತ ತಂತ್ರಾಂಶದ ಸೋರ್ಸ್ ಕೋಡ್ ನಿಮಗೆ ಲಭ್ಯವಿದೆ. ಮತ್ತೆ ಯಾರೋ ಕೊಡುವ ಉತ್ತರಕ್ಕೆ ಕಾದು ಕೂರಬೇಕಿಲ್ಲ ನೊಡಿ.

ಸುಲಭ ಅಂತೀರಾ ಸರಿ, ಇನ್ನೂ ಮನದಲ್ಲಿ ಅಳುಕಿದೆಯಾ?

ಗ್ನು/ಲಿನಕ್ಸ್ ಅಂತಂದ್ರೆ ಕಂಪ್ಯೂಟರ್ ಗೊತ್ತಿರೋ ಅನುಭವಿಗಳಿಗೆ ಮಾತ್ರ ಅಂತಿದ್ದ ಕಾಲ ಈಗಿಲ್ಲ. ನೀವು ಡೌನ್ಲೋಡ್ ಮಾಡಿಕೊಂಡಾಗ ಸಿಗೋ ಉಬುಂಟು ತಂತ್ರಾಂಶವನ್ನು ಸಿ.ಡಿಗೆ ಬರೆದು ಕೊಂಡಾಗ ಅದು ಲೈವ್-ಸಿ.ಡಿ ಎಂದು ಕರೆಸಿಕೊಳ್ಳುತ್ತದೆ. ನಿಮ್ಮ ಕಂಪ್ಯೂಟರ್ ಅನ್ನು ಸಿ.ಡಿ ಯಿಂದಲೇ ಸ್ಟಾರ್ಟ್ ಮಾಡಿ ನಿಮಗೆ ಬೇಕಾದ ಎಲ್ಲ ತಂತ್ರಾಂಶಗಳೂ ಇದರಲ್ಲಿ ಸಿಗುತ್ತದೆಯೇ? ಉಬುಂಟು ನಿಮ್ಮ ಕಂಪ್ಯೂಟರಿನಲ್ಲಿರುವ ಎಲ್ಲ ಹಾರ್ಡ್ವೆರ್ ಗಳ ಜೊತೆ ಕೆಲಸ ಮಾಡುವುದಕ್ಕೆ ಶಕ್ತವಿದೆಯೇ ಎಂದು ತಿಳಿದುಕೊಳ್ಳ ಬಹುದು. ಹೌದು.. ಇನ್ಸ್ಟಾಲ್ ಮಾಡದೆಯೇ.

ಮುಂದೇನು?

ಉಬುಂಟು ೧೦.೦೪ ಆವೃತ್ತಿ ಈಗ ಲಭ್ಯವಿದ್ದು ಸ್ವತಂತ್ರ ಹಾಗೂ ಮುಕ್ತ ತಂತ್ರಾಂಶದ ಎಲ್ಲ ಹೊಸ ಆವಿಷ್ಯಾರಗಳನ್ನು ನಿಮ್ಮ ಮುಂದಿಟ್ಟಿದೆ. ಮುಂಬರುವ ದಿನಗಳಲ್ಲಿ ಆಫಲ್ ಕಂಪನಿಯ ಮ್ಯಾಕ್ ಆಪರೇಟಿಂಗ್ ಸಿಸ್ಟಂನಷ್ಟೇ ಸುಂದರವಾದ ಡೆಸ್ಕ್ಟಾಪ್ ಅನುಭವವನ್ನು ನೀಡುವುದಾಗಿ ಮಾರ್ಕ್ ಹೇಳಿದ್ದಾರೆ. ಕೆನಾನಿಕಲ್ ಹಾಗೂ ಸ್ವತಂತ್ರ ತಂತ್ರಾಂಶ ಸಮುದಾಯ ಆಗಲೆ ಇದರ ಮೇಲೆ ಕೆಲಸ ಮಾಡಲಾರಂಭಿಸಿದ್ದು, ಅಕ್ಟೋಬರಿನಲ್ಲಿ ಬರಲಿರುವ ೧೦.೧೦ ಆವೃತ್ತಿ ನಿಮಗೆ ಅಚ್ಚರಿಯನ್ನು ಮೂಡಿಸಿದಲ್ಲಿ ಆಶ್ಚರ್ಯವಿಲ್ಲ.

ಸರ್ವರ್ ಆಗಿಯೂ ಉಪಯೋಗಿಸಲ್ಪಡುತ್ತಿರುವ ಉಬುಂಟು, ರಿಸೆಷನ್ ನಂತರ ತಮ್ಮ ಐ.ಟಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುತ್ತಿರುವ ಕಂಪನಿಗಳಿಗೆ ವರದಾನವಾಗಿ ಕಂಡುಬರುತ್ತಿರುವ ತಂತ್ರಾಂಶಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿರುವುದಂತೂ ನಿಜ. ಕ್ಲೌಡ್ ಕಂಪ್ಯೂಟಿಂಗ್, ವರ್ಚುಅಲೈಸೇಷನ್ ಹೀಗೆ ಅನೇಕ ಅತ್ಯಾಧುನಿಕ ಸೊಲ್ಯೂಷನ್ಗಳು ಉಬುಂಟುವಿನ ಜೊತೆಗೆ ಈಗಾಗಲೇ ಚೆನ್ನಾಗಿ ಕೆಲಸ ಮಾಡುತ್ತಲಿದ್ದು, ಮುಂಬರುವ ಆವೃತ್ತಿಗಳಲ್ಲಿ ಇದಕ್ಕೂ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This