೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ

ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು,  ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್ ಇರುವ ಈ ಶತಮಾನದಲ್ಲಿ, ಅಪ್ಪ ಅಮ್ಮಂದಿರನ್ನೂ ಮೀರಿಸಿ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಅನೇಕರು ಇಂದು ನಮ್ಮ ಸುತ್ತಮುತ್ತಲಿದ್ದಾರೆ. ವಿಸ್ಮಯಗಳ ಲೋಕದಲ್ಲಿ ಇದೂ ಒಂದು. ಆಗಾಗ್ಗೆ ಹೀಗೆ ನಮ್ಮ ಮಧ್ಯೆ ಕಂಡು ಬರುವ ಇಂತಹವರು ನಮ್ಮ ಹುಡುಗರಿಗೂ ಒಂದಿಷ್ಟು ಸ್ಪೂರ್ತಿಯಾಗಲಿ, ಜೊತೆಗೆ ವೇಳೆ, ತಂತ್ರಜ್ಞಾನ, ಸೌಲಭ್ಯಗಳ ಕೊರತೆ ಇವುಗಳ ಮಧ್ಯೆ ಇದು ನಮ್ಮವರಿಗೆ ಹೊರೆಯೂ ಆಗದಿರಲಿ.

ಈ ಕಥೆ ೧೨ ವರ್ಷದ ಪೋರ ಅಲೆಕ್ಸ್ ಗ್ಲೆನ್ ನದ್ದು. ಪೋರನಾಗಿದ್ದರೂ ಈತ ಸಾಮಾನ್ಯನಲ್ಲ. ಇಂಟರ್ನೆಟ್ ಬ್ರೌಸ್ ಮಾಡಲು ಬಳಸುವ ಮೋಜಿಲ್ಲಾ ಫೈರ್ ಫಾಕ್ಸ್ ನ ಸುರಕ್ಷತೆಯ ಕೊರತೆಗಳನ್ನು ಹೆಕ್ಕಿ ತೆಗೆಯುವುದು ಈತನ ಹವ್ಯಾಸ.  ಎರಡು ವಾರಗಳ ಇವನದೊಂದು ಹುಡುಕು ೩೦೦೦$ ಗಳನ್ನು ನಿರಾಯಾಸವಾಗಿ ಮೋಜಿಲ್ಲಾ ಫೌಂಡೇಶನ್ ನಿಂದ ಸಂಪಾದಿಸುವಂತೆ ಮಾಡಿದೆ.

ಸುರಕ್ಷತೆಗೆ ಪ್ರಾಶಸ್ತ್ಯ ನೀಡುವ ಸಾಪ್ಟ್ವೇರ್ ಕಂಪೆನಿಗಳು, ತಮ್ಮ ತಂತ್ರಾಂಶದ ಸುರಕ್ಷತೆಯ ಕೊರತೆಯ ಬಗ್ಗೆ ಸುಳಿವನ್ನು ನೀಡುವವರಿಗೆ ಡಾಲರುಗಳ ಮೊತ್ತದಲ್ಲಿ ಇನಾಮು ನೀಡುತ್ತವೆ. ಇದೇ ಯುನಿವರ್ಸಿಟಿ ಪ್ರೆಪ್ ಅಕ್ಯಾಡೆಮಿಯಲ್ಲಿ ೭ನೇ ಇಯತ್ತೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಲೆಕ್ಸ್ ಗೆ ಪ್ರೇರೇಪಣೆ. ತನ್ನ ಕಂಪ್ಯೂಟರಿನ ಬ್ರೌಸರ್ ನಲ್ಲೇ ಇರಬಹುದೇ ಕೊರತೆ ಎಂದು ಇವನು ಪ್ರತಿದಿನ ೯೦ ನಿಮಿಷಗಳಷ್ಟು ಹೊತ್ತು ನೆಡೆಸಿದ ಸಂಶೋಧನೆ ಕೊನೆಗೂ ಫಲ ನೀಡಿದೆ. ಕಂಪ್ಯೂಟರಿನ ಸೃತಿಯಲ್ಲಿನ ಒಂದು ದೋಷವನ್ನು ಕಂಡುಹಿಡಿದ ಈತನ ಸಾಧನೆ ಸಾಮಾನ್ಯವಾದುದ್ದಲ್ಲ ಮತ್ತು ಇಂತಹ ನ್ಯೂನ್ಯತೆಯನ್ನು ಕಂಡು ಹಿಡಿಯುವುದು ನಿಷ್ಣಾತರಿಗೇ ಸೈ ಎಂದು ಮೋಜಿಲ್ಲಾದ ಸೆಕ್ಯೂರಿಟಿ ಕಾರ್ಯಕ್ರಮದ ನಿರ್ವಾಹಕ ಹೇಳುತ್ತಾರೆ.

ತನ್ನ ಪೋಷಕರ ತಂತ್ರಜ್ಞಾನ ಸಂಬಂಧೀ  ಪುಸ್ತಕಗಳನ್ನು ಓದುತ್ತಾ ತನ್ನಂತಾನೇ ಇಂತಹ ವಿಷಯಗಳಲ್ಲಿ ಪರಿಣಿತಿ ಹೊಂದಿರುವ ಅಲೆಕ್ಸ್ – ತಂತ್ರಜ್ಞಾನವನ್ನು ಉಡುಗೊರೆಯಾಗಿ ಪಡೆದಿದ್ದಾನೆ ಎಂದು ಅವನ ಅಮ್ಮ ಎಲ್ಲಿಸಾ ಹೇಳುತ್ತಾರೆ.ಜೊತೆಗೆ ಅವನು ಕಂಪ್ಯೂಟರ್ ಗಳಲ್ಲಿ ಆಟವೊಂದನ್ನೇ ಆಡದೆ ಹೊಸ ವಿಷಯಗಳನ್ನು ಕಲಿಯುತ್ತಾನೆ ಎಂದು ಹೇಳುವುದನ್ನು ಮರೆಯಲಿಲ್ಲ.

ತಂತ್ರಾಂಶಗಳನ್ನು ಉಪಯೋಗಿಸಿ ಅರ್ಥಮಾಡಿಕೊಳ್ಳುವ, ಅದನ್ನು ಅಭಿವೃದ್ದಿಪಡಿಸುವ ಸ್ವಯಂ ಸೇವಕರು ಮೋಜಿಲ್ಲಾದಂತಹ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಬೆನ್ನೆಲುಬುಗಳಾಗಿದ್ದಾರೆ. ನೀವು ಕೂಡ ಇಂತಹ ತಂತ್ರಾಂಶ ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಿದ್ದರೆ, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಹೆಚ್ಚು ತಿಳಿದಿರುವ ಹೆಚ್ಚು ಬುದ್ದಿಶಾಲಿಗಳಾಗಿರಬೇಕಾದ್ದೇನೂ ಇಲ್ಲ. ನಿಮಗೆ ಇಷ್ಟ ಬಂದ ತಂತ್ರಾಂಶ ಸಮುದಾಯದಲ್ಲಿ ತೊಡಗಿ ಅಲ್ಲಿನ ಆಗುಹೋಗುಗಳನ್ನು ಗಮನಿಸುತ್ತಾ, ತಂತ್ರಾಂಶವನ್ನು ನಿಮ್ಮದೇ ಬಳಕೆಗೆ ಹಚ್ಚುತ್ತಾ, ಅದಲ್ಲಿನ ನ್ಯೂನ್ಯತೆ, ಉಪಯೋಗ, ಬದಲಾವಣೆ ಇತ್ಯಾದಿಗಳ ಬಗ್ಗೆ ಇತರರೊಡನೆ ಸಮಾಲೋಚನೆ ನೆಡೆಸುತ್ತ ಬಂದರೆ ಸಾಕು,  ಸಮುದಾಯಕ್ಕೆ  ನೀವು ನಿಮ್ಮದೇ ಕೊಡುಗೆಯನ್ನು ನೀಡಿರುತ್ತೀರಿ.

ಅಲೆಕ್ಸ್ ಗೆ ತಂತ್ರಜ್ಞಾನ ಪ್ರವೃತ್ತಿ, ಜೊತೆಗೆ ಬ್ಯಾಡ್ಮಿಂಟನ್, ಗಿಟಾರ್, ಮ್ಯಾಡ್ರಿನ್ ಇತ್ಯಾದಿ ಕಲಿಯುತ್ತಿರುವ ಈತ ಸೈನ್ಸ್ ಒಲಂಪಿಯಾಡ್ ಗೆ ರೊಬೋಟ್ ಸೃಷ್ಟಿಸುವ ಕನಸನ್ನು ಹೊತ್ತಿದ್ದಾನೆ. ಓಟ್ ಹಾಕಲು ಇನ್ನೂ ಮೀಸೆ ಚಿಗುರಿರದಿದ್ದರೂ NPR ಟಿ.ವಿಯಲ್ಲಿ ಬರುವ ರಾಜಕೀಯದ ಮಾತುಕತೆಗಳನ್ನು ಕೇಳಿ ಮಜಾ ಮಾಡುತ್ತಾನೆ. ತನ್ನ ಮುಂದಿನ ಸಂಶೋದನೆಗಳ ಬಗ್ಗೆ ಮಾತನಾಡುವಾಗ ಅಮ್ಮ ಎಚ್ಚರಿಸಿದಂತೆ ತನ್ನ ಎಂದಿನ ಕೆಲಸಗಳ ಬಗ್ಗೆಯೂ ಈತ ಗಮನವರಿಸುತ್ತಾನೆ ಎಂದುಕೊಳ್ಳೋಣ.

ಕೈಗೆ ಬಂದ ಕಾಸು ಖರ್ಚಾಗಲಿಕ್ಕೆ ವರುಷಗಳು ಬೇಕೆ? ಬಂದ ಹಣದಲ್ಲಿ ತಕ್ಷಣ ೧೦೦$ ಪಕ್ಕದ ಪ್ರಾಣಿ ಸುಶೃಷ ಕೇಂದ್ರಕ್ಕೆ. ಮಿಕ್ಕದ್ದು ಬ್ಯಾಂಕ್ ನಲ್ಲಿದೆಯಂತೆ.

ಕೊಸರು:- ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಮೆಚ್ಚುತ್ತಿರುವ ಯುವಪೀಳಿಗೆ ಕೆಲಸ ಮಾಡುತ್ತಲೇ ತಮ್ಮ ವೃತ್ತಿ ಪ್ರವೃತ್ತಿ ಎರಡನ್ನೂ ಇದರಲ್ಲೇ ಕಂಡುಕೊಳ್ಳುತ್ತಿವೆ. ಸಂಶೋಧನೆ ಇತ್ಯಾದಿಗಳನ್ನು ಮುಕ್ತವಾಗಿ ಎಲ್ಲರೊಂದಿಗೂ ಹಂಚಿಕೊಳ್ಳುತ್ತ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡುತ್ತಿರುವ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ನೀವು ಇತರರಿಗೂ ಪರಿಚಯಿಸುತ್ತೀರಲ್ಲವೇ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This