ಫ್ರೀ-ಸಾಪ್ಚ್ಟೇರ್ ಫೌಂಡೇಶನ್ ತನ್ನ ೪೦೦೦೦ ಸಾವಿರ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬೆಂಬಲಿಗರಲ್ಲಿ ಶೇಕಡ ೫೦ ರಷ್ಟು ಮಂದಿ @gmail.com ಇ-ಮೈಲ್ ಐಡಿ ಬಳಸುವುದನ್ನು ಕಂಡು ಎಚ್ಚರಿಕೆಯ ಮಾತೊಂದನ್ನು ಆಡಿದೆ.
ಜಾವಾ ಸ್ಕ್ರಿಪ್ಟ್, ಇಂಟರ್ನೆಟ್ನ ವೆಬ್ಪೇಜ್ಗಳಲ್ಲಿ ಬಳಕೆದಾರರಿಗೆ ಬೇಕಾದ ಸಣ್ಣ ಪುಟ್ಟ ದೃಶ್ಯ ಸಂಬಂದೀ ಪ್ರಭಾವಗಳನ್ನು ಬ್ರೌಸರ್ ಮೂಲಕ ತೋರಿಸಿ ದೈನಂದಿನ ಕೆಲಸಗಳಿಗೆ ಸೂಕ್ತ ಎನಿಸಿಕೊಂಡಿದ್ದ ಒಂದು ತಂತ್ರಾಂಶ. ಇದನ್ನು ಇಂದು ಜಿ-ಮೈಲ್ ಇತ್ಯಾದಿ ಅಂತರ್ಜಾಲ ಸೇವೆಗಳ ಮೂಲಕ ನಮ್ಮ ಕಂಪ್ಯೂಟರಿನಲ್ಲಿ ಅತ್ಯಂತ ಬಲಿಷ್ಟ ಕಾರ್ಯಗಳನ್ನು ನೆಡೆಸಲು ಬಳಸಲಾಗುತ್ತಿದೆ. ಈ ತಂತ್ರಾಂಶಗಳು, ನಿಮ್ಮ ಕಂಪ್ಯೂಟರಿನಲ್ಲಿ ಕೆಲಸ ಮಾಡುವ ಇತರೆ ತಂತ್ರಾಂಶಗಳಂತೆಯೇ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಾಗಿರುವುದು ಮುಖ್ಯ. ಆದರೆ ಸಧ್ಯಕ್ಕೆ ಜಾವಾಸ್ಕ್ರಿಪ್ಟ್ಗೆ ಸಂಬಂದಪಟ್ಟ ಬಹುತೇಕ ಪ್ರೋಗ್ರಾಮ್ಗಳು ನಿಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಎಂದರೆ ‘ಪ್ರೋಗ್ರಾಮ್ಗಳನ್ನು ನೆಡೆಸುವ, ಅಭ್ಯಸಿಸುವ, ಬದಲಿಸುವ ಮತ್ತು ಇತರರೊಡನೆ ಅವನ್ನು ಹಂಚಿಕೊಳ್ಳುವ’ ಸವಲತ್ತುಗಳನ್ನು ಮಾನ್ಯಮಾಡುತ್ತಿಲ್ಲ. ಜೊತೆಗೆ ನಿಮ್ಮ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಶಕ್ತಿ ಇವಕ್ಕೆ ಇದೆ. ಫ್ರೀ ಸಾಫ್ಟ್ವೇರ್ ಫೌಂಡೇಶನ್ ಬಳಕೆದಾರನ ಹಿಡಿತ ಅವನ ಕಂಪ್ಯೂಟರಿನ ಮೇಲಿಂದ ತಪ್ಪುವುದನ್ನು ತಡೆಯಲೆಂದೇ ಕಳೆದ ೨೫ ವರ್ಷಗಳಿಂದ ಕಾರ್ಯಗತವಾಗಿದೆ.
ಮುಕ್ತ ಹಾಗು ಸ್ವತಂತ್ರ ತಂತ್ರಾಂಶ ಬಳಕೆದಾರರು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿ-ಮೈಲ್ ಬಳಸುತ್ತಿರುವುದರಿಂದ, ಅವರಲ್ಲಿ ಖಾಸಗೀ ಮಾಲೀಕತ್ವದ ತಂತ್ರಾಂಶಗಳ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲು ಎಫ್.ಎಸ್.ಎಫ್ ಮುಂದಾಗಿದೆ. ಜೊತೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೂಡ ಯೋಜೆನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಸಧ್ಯಕ್ಕೆ ಘನಾತ್ಮಕವಾಗಿ ತತ್ತಕ್ಷಣದ ಕ್ರಮವಾಗಿ ಖಾಸಗಿ ತಂತ್ರಾಂಶಗಳನ್ನು ಬಳಸುವುದನ್ನು ನಿಲ್ಲಿಸಲು ಸೂಚಿಸಲಾಗುತ್ತಿದೆ. .
ಅನೇಕರು ಜಿ-ಮೈಲ್ ಬಳಸಲೇ ಬೇಡಿ ಎನ್ನುತ್ತಿದ್ದರೆ. ಕಾರಣ ಜಿ-ಮೈಲ್ ನಲ್ಲಿರುವ ನಿಮ್ಮ ವ್ಯಕ್ತಿಗತ ದತ್ತಾಂಶಗಳಿಗೆ ಮತ್ತು ನಿಮ್ಮ ವೈಯುಕ್ತಿಕ ಗೌಪ್ಯತೆ ನಿಮ್ಮ ಕೈನಲ್ಲಿಲ್ಲದೆ, ಗೂಗಲ್ನ ಪಾಲಾಗುವುದೇ ಆಗಿದೆ. ಇತ್ತೀಚಿನ ಸುದ್ದಿಯ ಪ್ರಕಾರ ಮಿಲಿಯಗಟ್ಟಲೆ ಜಿ-ಮೈಲ್ ಬಳಕೆದಾರರು ತಮ್ಮ ಇ-ಮೈಲ್ ಗಳನ್ನು ಕಳೆದುಕೊಂಡ ಸುದ್ದಿ ನಿಮಗೂ ತಿಳಿದಿರಬಹುದು. ಇದೇ ವಿಚಾರ ಇತರೆ ಖಾಸಗಿ ಇ-ಮೈಲ್ ಸೇವೆಗಳಿಗೂ ಅನ್ವಯಿಸುತ್ತದೆ. ನಿಮ್ಮ ಇ-ಮೈಲ್ ಸೇವೆ ಆಯ್ದುಕೊಳ್ಳುವಾಗ ನೀವು ಇದರ ಬಗ್ಗೆ ಸ್ವಲ್ಪವಾದರೂ ಯೋಚಿಸಿರಬಹುದು.
ಆದರೂ, ನೀವು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬೆಂಬಲಿಗರಾಗಿದ್ದು ಅಥವಾ ನಿಮ್ಮ ಗೆಳೆಯರು, ಮನೆಯ ಸದಸ್ಯರು ಇತ್ಯಾದಿ ಜಿ-ಮೈಲ್ ಬಳಸುತ್ತಿದ್ದರೆ, ಖಾಸಗಿ ಜಾವಸ್ಕ್ರಿಪ್ಟ್ ಬಳಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಬಳಸದಂತೆ ನೋಡಿಕೊಳ್ಳಲು ತಿಳುವಳಿಗೆ ನೀಡಿ.
ನಿಮ್ಮ ಪ್ರತಿಕ್ರಿಯೆಗಳು