Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು ಆಸಕ್ತರಿರುವವರಿಗೆ ಗ್ನು/ಲಿನಕ್ಸ್ ತಂತ್ರಾಂಶಗಳು ಬಹಳ ಅಚ್ಚುಮೆಚ್ಚಾಗುತ್ತವೆ. ಲಿನಕ್ಸ್ ಎಂಬ ಪದ ಕೇಳಿದೊಡನೆಯೇ ಅದು ಸಾಮಾನ್ಯರಿಗಲ್ಲ ಎನ್ನುವವರಿಗೆ ಅಚ್ಚರಿಗೊಳಿಸುವಷ್ಟು ಈ ತಂತ್ರಾಂಶಗಳು ಇಂದು ಅಭಿವೃದ್ದಿಗೊಂಡಿವೆ. ಉದಾಹರಣೆಗೆ – ಇತ್ತೀಚೆಗೆ ಅತ್ಯಂತ ಜನಪ್ರಿಯವಾಗುತ್ತಿರುವ ಮೊಬೈಲ್ ತಂತ್ರಾಂಶ ಆಂಡ್ರಾಯ್ಡ್ ಬಗ್ಗೆ ಕೇಳಿರಬೇಕಲ್ಲವೇ? ಅದೂ ಕೂಡ ಲಿನಕ್ಸ್ ಆಧಾರಿತ ಎಂದರೆ ನಂಬುತ್ತೀರಾ?

ಈಗ ಸಾಮಾನ್ಯನಿಗೆ ಉಪಯುಕ್ತವಾಗಿರುವ ಲಿನಕ್ಸ್‌ಗಳ ಬಗ್ಗೆ ತಿಳಿಯೋಣ. ಉಬುಂಟು ಎಂಬ ಗ್ನು/ಲಿನಕ್ಸ್ ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಬಳಕೆಯಲ್ಲಿದೆ. ಮಾರ್ಕ್ ಶಟಲ್‌ವರ್ಥ್ ಎಂಬಾತ ಸ್ಥಾಪಿಸಿದ ಕೆನಾನಿಕಲ್ ಎಂಬ ಕಂಪೆನಿ ಈ ಒಂದು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬೆಂಬಲವಾಗಿ ನಿಂತಿದೆ. ನೀವೂ ಇದನ್ನೊಮ್ಮೆ ಇನ್ಸ್ಟಾಲ್ ಮಾಡಿ ನೋಡುತ್ತೀರೆಂದರೆ https://ubuntu.com ಗೆ ಒಮ್ಮೆ ಭೇಟಿ ಕೊಡಿ. ಅಲ್ಲಿಯೇ ಇರುವ ಡಾಕ್ಯುಮೆಂಟೇಷನ್ ಹಾಗೂ ವೆಬ್ ‌ಪ್ರಿವ್ಯೂ ಉಬುಂಟು ಬಳಸುವುದನ್ನು ಸುಲಭಗೊಳಿಸುತ್ತವೆ.

ಆದರೆ, ವಿಂಡೋಸ್ ಬಳಸಿ ಅಭ್ಯಾಸವಿರುವ ಕೆಲವರಿಗೆ ಇದ್ದಕ್ಕಿದ್ದಂತೆ ಲಿನಕ್ಸ್‌ಗೆ ಬಂದರೆ ಅಲ್ಲಿನ ಕಮ್ಯಾಂಡುಗಳು ಇತ್ಯಾದಿಗಳನ್ನು ಬಾಯಿಪಾಠ ಮಾಡಿಕೊಳ್ಳಬೇಕಾಗುತ್ತದೆ, ಹೊಂದಿಕೊಳ್ಳಲು ಸ್ವಲ್ಪ ದಿನ ಹಿಡಿಯಬಹುದು ಎಂಬ ಇತ್ಯಾದಿ ಪ್ರಶ್ನೆಗಳಿಗೂ ಇಲ್ಲಿದೆ ಒಂದು ಚುಟುಕು ಉತ್ತರ. ಗ್ನು/ಲಿನಕ್ಸ್ ಅಭಿವೃದ್ದಿಯ ಹೊಸ ಹಂತಗಳಲ್ಲಿ ವಿಂಡೋಸ್ ನಂತೆಯೇ ನೀವು ಲಿನಕ್ಸ್‌ನಲ್ಲಿಯೂ ಕೀಬೋರ್ಡ್ ಹಾಗೂ ಮೌಸ್ ಬಳಸಿ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಬಹುದು. ಒಂದೇ ಒಂದು ವ್ಯತ್ಯಾಸವೆಂದರೆ ಲಿನಕ್ಸ್‌ಗೆ ತನ್ನದೇ ಆದ ತಂತ್ರಾಂಶಗಳಿರುತ್ತವೆ. ಅದನ್ನು ಇನ್ಸ್ಟಾಲ್ ಮಾಡುಕೊಳ್ಳುವ ಕ್ರಮದಲ್ಲಿ ಬದಲಾವಣೆ ಇರುತ್ತದೆ ಅಷ್ಟೇ. ಒಮ್ಮೆ ಇನ್ಸ್ಟಾಲ್ ಮಾಡಿಕೊಂಡು ಅದರ ಕಾರ್ಯವೈಖರಿ ಅರಿತರೆ ಸುಲಭವಾಗಿ ಯಾವುದೇ ಕಂಪ್ಯೂಟರ್ ತಂತ್ರಾಂಶದ ಜೊತೆಗೆ ಕೆಲಸ ಮಾಡಬಹುದು.

ಆದರೂ, ವಿಂಡೋಸ್‌ನಲ್ಲಿ ಬಳಸುವ ತಂತ್ರಾಂಶಗಳನ್ನು ಲಿನಕ್ಸ್‌ನಲ್ಲಿಯೂ ಬಳಸಲು ಸಾಧ್ಯವೇ ಎನ್ನುವಿರಾದರೆ, ಅದೂ ಕೂಡ ಸಾಧ್ಯ. WINE ಎಂಬ ವಿಂಡೋಸ್ ಎಮ್ಯುಲೇಟರ್ ನಿಮ್ಮ ಲಿನಕ್ಸ್ ಆಪರೇಟಿಂಗ್ ಸಿಸ್ತಂ‌ನಲ್ಲಿ ಲಭ್ಯವಿದ್ದಲ್ಲಿ, ವಿಂಡೋಸ್ ತಂತ್ರಾಂಶಗಳನ್ನು ಸ್ಥಾಪಿಸಿಕೊಳ್ಳಬಹುದು. ಇದು ಮೊದಮೊದಲು ಕಿರಿಕಿರಿ ಎನಿಸಬಹುದಾದ್ದರಿಂದ ಲಿನಕ್ಸ್ ತಿಳಿದವರ ಸಹಾಯ ಪಡೆದುಕೊಂಡರೆ ಒಳ್ಳೆಯದು.

ಮೊನ್ನೆ ಒಂದು ವಿಶೇಷ ಕಾದಿತ್ತು. ಹೀಗೇ ಇಂಟರ್ನೆಟ್‌ನಲ್ಲಿ ಜಾಲಾಡುತ್ತಿರುವಾಗ Zorin ಎಂಬ ಹೊಸ ಲಿನಕ್ಸ್ ತಂತ್ರಾಂಶವನ್ನು ನೋಡಿದೆ. ವಿಂಡೋಸ್ ಎಕ್ಸ್‌ಪಿ ಅಥವಾ ೭ ಬಳಸುತ್ತಿರುವವರಿಗೆ, ಅದರಂತೆಯೇ ಕಾಣುವ ಹಾಗೂ ಕೆಲಸ ಮಾಡುವ Zorin ಕಂಡು ಸ್ವಲ್ಪ ಖುಷಿ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶವಾಗಿದ್ದರೂ ನೋಡಲು ಇದು ಥೇಟ್ ವಿಂಡೋಸ್. ಟಾಕ್ಸ್‌ಬಾರ್, ಫೈಲ್‌ಸಿಸ್ಟಂ, ಸ್ಟಾರ್ಟ್ ಮೆನು, ಡೆಸ್ಕ್‌ಟಾಪ್ ಹೀಗೆ ಎಲ್ಲವೂ ವಿಂಡೋಸ್ ರೀತಿಯದ್ದೇ. ವಿಂಡೋಸ್ ತಂತ್ರಾಂಶಗಳನ್ನೂ ಕೂಡ ಸುಲಭವಾಗಿ ಇನ್ಸ್ಟಾಲ್ ಮಾಡಿಕೊಳ್ಳಬಹುದು.

೧.೧೪ ಜಿಬಿ ಇರುವ ಈ ಆಪರೇಟಿಂಗ್ ಸಿಸ್ಟಂ‌ನ ಪ್ರತಿಯನ್ನು ಮುಕ್ತವಾಗಿ https://zorin-os.com ನಿಂದ ಪಡೆಯಬಹುದು. ವಿಂಡೋಸ್ ಈಗಾಗಲೇ ಇನ್ಸ್ಟಾಲ್ ಆಗಿದ್ದರೂ, ನಿಮ್ಮ ಕಂಪ್ಯೂಟರಿನಲ್ಲಿ ೫ ರಿಂದ ೧೦ ಜಿ.ಬಿ ಸ್ಪೇಸ್ (ಹಾರ್ಡ್‌ಡಿಸ್ಕ್ ಮೆಮೋರಿ) ಇರುವ ಖಾಲಿ ಪಾರ್ಟೀಷನ್ ಒಂದರಲ್ಲಿ ಇದನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು. ಲಿನಕ್ಸ್ ಬಳಸಲು ಸಾಧ್ಯವಾಗದಿದ್ದಲ್ಲಿ, ಸಿಸ್ತಂ ರೀಬೂಟ್ ಮಾಡಿ ಪರದೆಯ ಮೇಲೆ ವಿಂಡೋಸ್ ಆಯ್ಕೆ ಮಾಡಿದರಾಯ್ತು. ಮೊದಲಿನಂತೆಯೇ ವಿಂಡೋಸ್‌ನಲ್ಲಿ ಕೆಲಸ ಮಾಡಲು ಶುರುವಿಟ್ಟುಕೊಳ್ಳಬಹುದು.

ಜೋರಿನ್ ಓ.ಎಸ್ ನಲ್ಲಿ ಹೊಸ ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಲು ಸಾಫ್ಟ್ವೇರ್ ಸೆಂಟರ್ ಇದೆ. ಇಂಟರ್ನೆಟ್ ಕನೆಕ್ಷನ್ ಇದ್ದರೆ ನಿಮಗೆ ಬೇಕಾದ ಕೆಲಸಕ್ಕೆ ಉತ್ತಮ ಮುಕ್ತ ತಂತ್ರಾಂಶಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. Play-On-Linux ಎಂಬ ವಿಂಡೋಸ್ ಆಟಗಳನ್ನು ಲಿನಕ್ಸ್ ನಲ್ಲಿ ಆಡಲು ಸಾಧ್ಯವಾಗಿಸುವ ತಂತ್ರಾಂಶ ಕೂಡ ಇದರೊಂದಿಗೆ ಇದೆ. ವಿಂಡೋಸ್ ಲುಕ್ ಬೇಸರ ತರಿಸಿದರೆ, ಅದನ್ನು ಮ್ಯಾಕ್ ಓಸ್, ವಿಸ್ತಾ ಹೀಗೆ ಬೇರೆ ಥೀಮ್‌ಗಳನ್ನೂ ಬದಲಿಸಬಹುದು. ಉತ್ತಮ ಮಲ್ಟಿಟಾಸ್ಕಿಂಗ್, ಉತ್ತಮ ಸೆಕ್ಯೂರಿಟಿಗೆ, ವೈರಸ್‌ಗಳ ಹಾವಳಿಯಿಂದ ಸ್ವಲ್ಪ ದೂರವಿರಲು ಮತ್ತು ಇನ್ನೂ ಅನೇಕ ಕಾರಣಗಳಿಗೆ ಲಿನಕ್ಸ್ ಬಳಕೆ ಉಪಕಾರಿ. ಒಮ್ಮೆ ಬಳಸಿ ನೋಡಿ.

ಸೂಚನೆ :- ಆಪರೇಟಿಂಗ್ ಸಿಸ್ಟಂಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಾಗ ಡಿಸ್ಕ್ ಪಾರ್ಟೀಶನ್ ಬಗ್ಗೆ ತಿಳಿದಿದ್ದರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಯಾರಾದರೂ ಅನುಭವ ಉಳ್ಳ ವ್ಯಕ್ರಿಗಳ ನೆರವು ಪಡೆಯುವುದು ಒಳಿತು. ಸೂಚನೆ ಓದಿದ ನಂತರವೂ ನೀವೇ ಇದನ್ನು ಪ್ರಯೋಗಿಸಿ ಕಂಪ್ಯೂಟರ್‌ನಲ್ಲಿನ ದತ್ತಾಂಶ/ಡೇಟಾದ ನಷ್ಟಕ್ಕೆ ಕಾರಣರಾದಲ್ಲಿ ನಾವು ಜವಾಬ್ದಾರರಲ್ಲ.

ಕಂಪ್ಯೂಟರಿಗೆ ನೇರವಾಗಿ ಇನ್ಸ್ಟಾಲ್ ಮಾಡದೆ ಲಿನಕ್ಸ್ ಬಳಸಿ ನೋಡುವುದು ಹೇಗೆ ಎಂದು ಮುಂದಿನ ಸಂಚಿಕೆಗಳಲ್ಲಿ ಅರಿಯೋಣ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ.


Watch this video on YouTube
Embedded with WP YouTube Lyte.

ವಿಶೇಷ – ಈ ಲೇಖನ ಮಾರ್ಚ್ ೯ ರಂದು ಸಂಯುಕ್ತ ಕರ್ನಾಟಕದ ಟೆಕ್ ಕನ್ನಡ ಅಂಕಣದಲ್ಲಿ ಪ್ರಕಟವಾಗಿದೆ. 

 

One Response to “Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ”

  1. Subramanya Prasad B says:

    Hi,

    Thanks for providing the very useful information. Windows 7 got corrupted in my laptop.So I can download and install in my system.

    Regards,
    Subramanya Prasad B

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This