ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ ಕಂಪನಿಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಲಿನಕ್ಸ್ ಮತ್ತು FOSS ಗೆ ಸಂಬಂಧಿಸಿದ ತಂತ್ರಾಂಶ ಮತ್ತು ಸೇವೆಯನ್ನು ಒದಗಿಸುವವರು ಇದಕ್ಕೆ ಹೊರತಾಗಿಲ್ಲ. ಸಾಮಾನ್ಯವಾಗಿ, ಅಭಿವೃದ್ಧಿ ಪಡಿಸಲಾದ ತಂತ್ರಾಂಶವು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅವುಗಳು ದೋಷಮುಕ್ತವಾಗಿವೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ತಂತ್ರಾಂಶಗಳನ್ನು ಬಳಸಿ ನೋಡುವುದು ಇವರ ಕೆಲಸವಾಗಿರುತ್ತದೆ. ಇದಕ್ಕಾಗಿ ಸ್ವಯಂಚಾಲಿತ (ಆಟೊಮ್ಯಾಟಿಕ್) ಮತ್ತು ಮ್ಯಾನುವಲ್ ವಿಧಾನಗಳಿರುತ್ತವೆ. ದೋಷ ವರದಿ ಮಾಡುವುದೂ (ಬಗ್ ರಿಪೋರ್ಟಿಂಗ್) ಸಹ ಈ ಕ್ಷೇತ್ರದಲ್ಲಿರುವವರ ಮುಖ್ಯವಾದ ಕೆಲಸವಾಗಿರುತ್ತದೆ. ಸೂಕ್ತವಾದ ತರಬೇತಿ ನೀಡುವ ಕೋರ್ಸುಗಳನ್ನು ಪಡೆದುಕೊಂಡಲ್ಲಿ ಹೇರಳವಾದ ಅವಕಾಶಗಳಿರುವ ಈ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಕೇವಲ ಹವ್ಯಾಸಿಗರ ಆಟದ ವಸ್ತುವಾಗಿ ಜನ್ಮತಾಳಿದ ಲಿನಕ್ಸ್ ಮತ್ತು ಅದರಿಂದ ಪ್ರೇರಿತಗೊಂಡ ಉಚಿತ ಮತ್ತು ಮುಕ್ತ ತಂತ್ರಾಂಶಗಳಲ್ಲಿನ ಹಲವಾರು ಧನಾತ್ಮಕ ಅಂಶಗಳ ಕಾರಣದಿಂದಾಗಿ ದಿನ ಕಳೆದಂತೆಲ್ಲಾ ವ್ಯಾಪಕವಾಗಿ ಹರಡುತ್ತಿವೆ. ಸೂಕ್ತವಾದ ನಿಲುವು, ತಿಳುವಳಿಕೆ, ಅದೃಷ್ಟ ಮತ್ತು ಸಂಪರ್ಕಗಳನ್ನು ಹೊಂದಿದ್ದರೆ ನೀವು ಲಿನಕ್ಸ್ ಸಂಬಂಧಿ ವೃತ್ತಿಯಿಂದ ಸುಲಭವಾಗಿ ಹಣಗಳಿಸಬಹುದು. ಈಗಾಗಲೆ ಮಾಹಿತಿ ತಂತ್ರಜ್ಞಾನದ ಈ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದರೆ, ಸೂಕ್ತವಾದ ಸರ್ಟಿಫಿಕೇಶನ್ ಕೋರ್ಸುಗಳನ್ನು ಮತ್ತು ತಿಳುವಳಿಕೆಗಳನ್ನು ಪಡೆಯುವುದರಿಂದ ನಿಮ್ಮ ವೃತ್ತಿಜೀವನದ ಸ್ತರವನ್ನು ವೃದ್ಧಿಸಲು ಸಹಕಾರಿಯಾದೀತು.
ನಿಮ್ಮ ಪ್ರತಿಕ್ರಿಯೆಗಳು