ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್‌ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ – ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳ ಹೆಸರು, ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಕಂಗ್ಲೀಷ್‌ನಿಂದ ಕನ್ನಡೀಕರಿಸುತ್ತಿದೆ. ೫೦೦೦ದಷ್ಟು ಪುಟಗಳನ್ನು ಹೆಣೆಯುವುದರೊಂದಿಗೆ ೨೦೦೦ ಪುಸ್ತಕಗಳು ಕನ್ನಡಿಗರಿಗೆ ಸುಲಭವಾಗಿ ಇಂಟರ್‌ನೆಟ್‌ನಲ್ಲಿ (ಕನ್ನಡದಲ್ಲೇ) ಹುಡುಕಲು ಸಿಗಲಿವೆ.
ಕನ್ನಡ ಸಂಚಯದ ಹೊಸ ಯೋಜನೆ – ಸಮೂಹ ಸಂಚಯ ಸಮುದಾಯದ ಒಗ್ಗಟ್ಟಿನ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಆಗಬೇಕಿರುವ ಅನೇಕ ಕೆಲಸಗಳನ್ನು ‘ಕ್ರೌಡ್ ಸೋರ್ಸಿಂಗ್’ ಮೂಲಕ ಸಾಧ್ಯವಾಗಿಸುವ ವೇದಿಕೆಯಾಗಿದೆ. ಮೊದಲಿಗೆ, ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ (https://oudl.osmania.ac.in) ೨೦೦೦ಕ್ಕೂ ಹೆಚ್ಚು ಪುಸ್ತಕಗಳ ಹೆಸರು ಇಂಗ್ಲೀಷ್ ನಲ್ಲಿದ್ದು, ಇವುಗಳನ್ನು ಕನ್ನಡೀಕರಿಸುವುದರ ಜೊತೆಗೆ ಯುನಿಕೋಡ್ ಸರ್ಚ್ ಸೌಲಭ್ಯದ ಮೂಲಕ ಈ ಪುಸ್ತಕಗಳನ್ನು ಕನ್ನಡಿಗರಿಗೆ ಸುಲಭವಾಗಿ ಸಿಗುವಂತೆ ಮಾಡುವ ಆಲೋಚನೆ ಈ ಯೋಜನೆಗಿದೆ. ಕೇವಲ ಸರ್ಚ್ ಸೌಲಭ್ಯ ಕೊಡುವುದಷ್ಟೇ ಅಲ್ಲದೇ ಈ ಎಲ್ಲ ಪುಸ್ತಕಗಳಿಗೆ ಅವುಗಳದ್ದೇ ಆದ ವಿಕಿ ಪುಟಗಳನ್ನು ಕೂಡ ಕನ್ನಡ ವಿಕಿಪೀಡಿಯದಲ್ಲಿ ಹೆಣೆಯುವಂತೆ ಮಾಡುವುದು, ವಿಕಿಪೀಡಿಯದಲ್ಲಿ ಈಗಾಗಲೇ ಲಭ್ಯವಿಲ್ಲದ ಲೇಖಕ/ಲೇಖಕಿಯರ ಪುಟಗಳು, ಕನ್ನಡ ಪುಸ್ತಕ ಪ್ರಕಾಶಕರ ಪುಟಗಳನ್ನೂ ಸೃಷ್ಟಿ ಮಾಡುವುದು ಇದರಿಂದ ಸಾಧ್ಯವಾಗಲಿದೆ.
ಪುಸ್ತಕ, ಲೇಖಕ, ಪ್ರಕಾಶಕರ ಹೆಸರುಗಳನ್ನು ಕನ್ನಡಿಕರಿಸುವ/ಲಿಪ್ಯಂತರಿಸುವ ಅವಕಾಶ ನೀಡಲಾಗಿದ್ದು, ಓಸ್ಮಾನಿಯ ಯುನಿವರ್ಸಿಟಿಯಲ್ಲಿರುವ ಪುಸ್ತಕದ ಪುಟಕ್ಕೆ ಕೊಟ್ಟಿರುವ ಕೊಂಡಿ ಬಳಸಿ ಸರಿಯಾದ ಕನ್ನಡ ಹೆಸರುಗಳನ್ನು ಓದಿ ನಂತರ ನೇರವಾಗಿ ಸಮೂಹ ಸಂಚಯದಲ್ಲಿ ಟೈಪಿಸಬಹುದು.
ಈ ಕಾರ್ಯ ಪೂರ್ಣಗೊಂಡ ನಂತರ, ಪುಸ್ತಕಗಳನ್ನು ಸುಲಭವಾಗಿ ಸರ್ಚ್ ಮಾಡುವ ವ್ಯವಸ್ಥೆ ನೀಡುವ ಜೊತೆಗೆ ವಿಕಿಪೀಡಿಯದಲ್ಲಿ ಓಸ್ಮಾನಿಯ ಯುನಿವರ್ಸಿಟಿ ಡಿಜಿಟಲ್ ಲೈಬ್ರರಿಯ ಪುಸ್ತಕಗಳ ಪರಿವಿಡಿಯನ್ನು ಸಂಚಯ ತಂಡ ಸಿದ್ದಪಡಿಸಲಿದೆ.
ಮುಂದಿನ ಹಂತದಲ್ಲಿ, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಪುಸ್ತಕಗಳನ್ನು ಲಿಪ್ಯಂತರಿಸುವ ಕೆಲಸ ಪ್ರಾರಂಭವಾಗಲಿದೆ. ಕನ್ನಡದ ಪುಸ್ತಕಗಳು ಸುಲಭವಾಗಿ ಇಂಟರ್ನೆಟ್‌ನಲ್ಲಿ ಲಭ್ಯವಾಗಿಸಲು ಈ ಯೋಜನೆಯೊಂದಿಗೆ ಕೈಜೋಡಿಸಿ.
ನಿಮ್ಮ ಪ್ರತಿಕ್ರಿಯೆಗಳು