ಸ್ಪರ್ಧೆ

Written By Omshivaprakash H L

April 3, 2014

ನೋವೆನಾ ಓಪನ್‌ಸೋರ್ಸ್ ಲ್ಯಾಪ್‌ಟಾಪ್

ಬನ್ನೀ ಸ್ಟುಡಿಯೋಸ್‌ನ ಬನ್ನೀ ಮತ್ತು ಕ್ಸಾಬ್ಸ್ ಮುಕ್ತ ಲ್ಯಾಪ್‌ಟಾಪ್ ಒಂದನ್ನು ಪ್ರಸ್ತುತ ಪಡಿಸುತ್ತಿದ್ದಾರೆ.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳಂತೆಯೇ, ಹಾರ್ಡ್‌ವೇರ್ ಅನ್ನೂ ಕೂಡ ತಯಾರಿಸಲು ಯಾರಿಗಾದರೂ ಸಾಧ್ಯವಾಗಬೇಕು ಎಂಬ ಉದ್ದೇಶ ಹೊಂದಿರುವ ಮುಕ್ತ ಯಂತ್ರಾಂಶ (ಓಪನ್ ಹಾರ್ಡ್ವೇರ್/Open Hardware) ಪ್ರಾಜೆಕ್ಟ್‌ಗಳಲ್ಲಿ ನೋವೆನಾ ಕೂಡ ಒಂದು.

ಹವ್ಯಾಸಿ ಯೋಜನೆಯಾಗಿ ಪ್ರಾರಂಭವಾದ ನೋವೆನಾ, ತನ್ನದೇ ಗ್ರಾಹಕರನ್ನು ಕೂಡ ಕಂಡುಕೊಳ್ಳಲು ಕ್ರೌಡ್ ಸೋರ್ಸಿಂಗ್ ಪ್ರಚಾರವನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬೆಂಬಲಿಸಲೂ, ನಿಮಗೆ ಬೇಕಾದಂತೆ ಕೆಲಸ ಮಾಡಬಲ್ಲ, ಎಲ್ಲ ವ್ಯವಸ್ಥೆಗಳನ್ನು ಹೊಂದಿರುವ ಲ್ಯಾಪ್‌ಟಾಪ್ ಮತ್ತು ಅದರ ಪೂರ್ಣ ರಚನೆಯನ್ನು ಪಡೆಯುವ ಅವಕಾಶವಿದೆ.

ಇಂತದ್ದೊಂದು ಲ್ಯಾಪ್‌ಟಾಪ್ ನೀವೇ ತಯಾರಿಸಿಕೊಳ್ಳುತ್ತೇವೆ ಎಂದರೆ, ನೋವೆನಾದ ಪೂರ್ಣ ಡಿಸೈನ್ ಮತ್ತು ಇತರೆ ಮಾಹಿತಿ ಈ ಕೊಂಡಿಯಲ್ಲಿ ಲಭ್ಯವಿದೆ. ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಮಾಹಿತಿ. ಈ ಹಿಂದೆ ಅನೇಕರು ಕೆಲಸ ಮಾಡಿರುವ ಯೋಜನೆಗಳಲ್ಲಿ ತೊಡಗಿಕೊಳ್ಳುವ ಬದಲು, ಕಡಿಮೆ ಬೆಲೆಯ, ಸುಲಭವಾಗಿ ತಯಾರಿಸಬಲ್ಲ ಹಾರ್ಡ್ವೇರ್‌ಗಳ ತಯಾರಿಕೆ ಕಲಿತು, ಅವನ್ನು ಉತ್ಪಾದಿಸುವವರೆಗೆ ಸ್ವಾವಲಂಬನೆ ಹೊಂದಲು ಮುಕ್ತ ಯಂತ್ರಾಂಶಗಳು ಸಹಕಾರಿ.

ಚಿತ್ರ ಮತ್ತು ವಿಡಿಯೋ: Andrew (bunnie) Huang, licensed under a Creative Commons Attribution-ShareAlike 3.0 Unported.

ಅರಿವಿನ ಅಲೆಗಳು

ಗ್ನು/ಲಿನಕ್ಸ್ ಹಾಗೂ ಇತರೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬಳಸುತ್ತಿರುವ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವ ಸದವಕಾಶ. ನಿಮ್ಮೆಲ್ಲರ ಅನುಭವಗಳನ್ನು ಈ ವರ್ಷದ ಸ್ವತಂತ್ರ ದಿನಾಚರಣೆಯ ಅಂಗವಾಗಿ ಮತ್ತಷ್ಟು ಜನರೊಡನೆ “ಅರಿವಿನ ಅಲೆಗಳು” ಹಂಚಿಕೊಳ್ಳುತ್ತದೆ.. ಇಂದೊಂದು ವಿನೂತನ ಸ್ವತಂತ್ರ ದಿನಾಚರಣೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದಿಂದ ತಂತ್ರಾಂಶ ಹಾಗೂ ತಂತ್ರಜ್ಞಾನದ ಮೇಲೆ ನಮಗೆ ಸಿಗುವ ಸ್ವಾತಂತ್ರ್ಯದ ಆಚರಣೆಯೂ ಹೌದು. ನೀವು ಬರೆಯುವ ಪ್ರತಿ ಲೇಖನವೂ ಅಲೆಗಳಾಗಿ ಬೇರೆಯವರನ್ನು ಸೇರಲಿವೆ.

ಆಗಸ್ಟ್ ೧ ರಿಂದ ೧೪ ರವರೆಗೆ ದಿನವೂ ಒಂದೊಂದು ಹೊಸ ವಿಷಯಗಳು. ದಿನನಿತ್ಯ ಬಳಸುವ ಮುಕ್ತ ತಂತ್ರಾಂಶ/ತಂತ್ರಜ್ಞಾನಗಳ ಬಗ್ಗೆಯ ಲೇಖನಗಳು ೧೪ ಅಲೆಗಳ ರೂಪದಲ್ಲಿ ನಿಮಗೆಲ್ಲರಿಗೂ ಸಿಗಲಿದೆ. ಆಗಸ್ಟ್ ೧೫ ರಂದು ಎಲ್ಲಾ ಅಲೆಗಳನ್ನೂ ಒಂದೇ ಕಡೆ ಸೇರಿಸಿ e-ಪುಸ್ತಕ ಬಿಡುಗಡೆ ಮಾಡಲಾಗುವುದು.

ಈ ಕಾರ್ಯಕ್ರಮ ಮಾಡಲು ಸ್ಪೂರ್ತಿ phpadvent.org ಎನ್ನುವ ವೆಬ್ ಸೈಟ್ ನಿಂದ. ಅವರು ಕ್ರಿಸ್ಮಸ್ ಆಚರಿಸುವ ಸಲುವಾಗಿ ಡಿಸೆಂಬರ್ ೧ ರಿಂದ ೨೪ ರವರೆಗೆ ಇದೇ ತರಹ PHP ಎಂಬ ತಂತ್ರಾಂಶದ ಬಗೆಗಿನ ಲೇಖನಗಳನ್ನು ಬರೆದು ಹಂಚಿಕೊಳ್ಳುತ್ತಾರೆ.

ಲೇಖನ ಬರೆಯುವ ಮುನ್ನ ಇದನ್ನು ಓದಿ. ನಮ್ಮ ತಂಡಕ್ಕೆ ಏನಾದರೂ ಹೇಳುವುದಿದ್ದರೆ arivu AT sanchaya DOT net ಗೆ ಬರೆದು ಕಳಿಸಿ.

ದಿನದ ಬಹಳಷ್ಟು ಸಮಯವನ್ನು ಬಹಳಷ್ಟು ತಂತ್ರಜ್ಞಾನದ ವಿಷಯಗಳನ್ನು ಕಲಿಯುವುದರಲ್ಲಿ ಕಳೆಯುತ್ತೇವೆ, ಏನಾದರೂ ತೊಂದರೆಯಾದರೆ ಅದನ್ನು ಅಲ್ಲೇ ಸರಿಪಡಿಸಿಕೊಳ್ಳುತ್ತೇವೆ. ನಮ್ಮಲ್ಲೇ ಇರುವ data ಉಪಯೋಗಿಸಿಕೊಂಡು ಬಹಳಷ್ಟು ವಿಧವಾದ ಅಧ್ಯಯನ ಮಾಡುತ್ತೇವೆ, ಸಿಕ್ಕಿದ ಉತ್ತರಗಳನ್ನು ನೋಡಿ, ಮುಂದೆ ಏನಾಗಬಹುದು ಎಂದು ಊಹಿಸುತ್ತೇವೆ. ಇನ್ನೊಂದಷ್ಟು ಹೊತ್ತು ಟ್ವಿಟರ್, ಹ್ಯಾಕರ್ ನ್ಯೂಸ್, Reddit ನಂತಹ ಅಂತರ್ಜಾಲ ಪುಟಗಳಲ್ಲಿ ಸಿಗುವ ಸುದ್ದಿಗಳನ್ನು ಓದಿರುತ್ತೇವೆ.ಹಾಗೇ ನೀವು ಓದಿರುವ/ಕೇಳಿರುವ/ಕಂಡು ಹಿಡಿದಿರುವ ತಂತ್ರಾಂಶಗಳ ಬಗ್ಗೆ ಅಥವಾ ಹೊಸ ತಂತ್ರಜ್ಞಾನದ ಬಗ್ಗೆ ಅಥವಾ ಹೊಸ ಆವಿಷ್ಕಾರಗಳ ಬಗ್ಗೆ ಇತರರೊಂದಿಗೆ ಹಂಚಿಕೊಳ್ಳುವ ಮನಸ್ಥಿತಿ ಉಳ್ಳವರಾಗಿದ್ದರೆ ಲೇಖನವನ್ನು ಬರೆದು ನಮಗೆ ಕಳುಹಿಸಿ.

ಎಲ್ಲಾ ಲೇಖನಗಳೂ ಒಂದೇ ತರಹದ್ದಾಗಿ ಮನಸಿಗೆ ಬೇಸರ ತರಬಾರದು ಎನ್ನುವ ಕಾರಣಕ್ಕಾಗಿ ಹಾಗೂ ಬಹಳಷ್ಟು ಜನರಿಗೆ ಅವಕಾಶ ಕೊಡುವ ಕಾರಣಕ್ಕಾಗಿ ಒಬ್ಬರಿಂದ ಒಂದೇ ಲೇಖನವನ್ನು ತೆಗೆದುಕೊಳ್ಳುತ್ತೇವೆ.

ಲೇಖನಗಳನ್ನು ನಮಗೆ ಕಳುಹಿಸಲು ಕಡೆಯ ದಿನಾಂಕ ೨೨ ಜುಲೈ ೨೦೧೧.

https://arivu.sanchaya.net

ಓಪನ್ ಸೋರ್ಸ್‌ ನತ್ತ ಸಿಸ್ಕೋ ಒಲವು

ಇಂದು ಐ.ಟಿ ಜಗತ್ತು ಕ್ಲೌಡ್ ಕಂಪ್ಯೂಟಿಂಗ್ ನತ್ತ ತಲೆಮಾಡಿದೆ. ಕ್ಲೌಡ್ ಮೂಲಭೂತ ಸೌಕರ್ಯಗಳು (Infrastructure) 2011 ರ ನೆಟ್ವರ್ಕಿಂಗ್ ಮಾತುಗತೆಗಳ ವಿಷಯಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತವೆ. ಇದರಲ್ಲಿ ಪ್ರಮುಖ ಪಾತ್ರವಹಿಸುವುದು ನೆಟ್ವರ್ಕಿಂಗ್ ಸಾಮ್ರಾಜ್ಯದ ದೈತ್ಯ ಸಿಸ್ಕೋ. ಕ್ಲೌಡ್ ಕಂಪ್ಯೂಟಿಂಗ್ ಗೆ ಬೇಕಿರುವ ಸರ್ವರ್, ರೂಟಿಂಗ್ ಮತ್ತು ಸ್ವಿಚಿಂಗ್ ಸೌಕರ್ಯಗಳು ಇತ್ಯಾದಿಯನ್ನು ಸಿಸ್ಕೋ ಪೂರೈಸುತ್ತದೆ.

ಈ ಕಾಲಗಟ್ಟದಲ್ಲಿ ಕ್ಲೌಡ್ ಅಭಿವೃದ್ದಿಯ ಮತ್ತು ನಿಯೋಜನೆ, ಮಾನದಂಡಗಳು ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಅತಿಮುಖ್ಯವಾಗಿ ಸಹಾಯಕ್ಕೆ ಬರುತ್ತವೆ.

ಸಿಸ್ಕೋದ ಮುಖ್ಯ ತಾಂತ್ರಿಕ ನಿರ್ವಾಹಕ ಲ್ಯೂ ಟಕರ್ (Lew Tucker) ಕ್ಲೌಡ್ ಸಂಬಂದಿತ ಕೆಲಸಗಳು ನೆಡೆಯುತ್ತಿರುವ ಓಪನ್ ಸೋರ್ಸ್ ಸಮುದಾಯಗಳಲ್ಲಿ ತಮ್ಮ ಆಸ್ಥೆ ಇರುವುದನ್ನು ಇತ್ತೀಚೆಗೆ ತಿಳಿಸಿದ್ದಾರೆ. ಓಪನ್ ಸೋರ್ಸ್ ಕ್ಲೌಡ್ ಕಂಪ್ಯೂಟಿಂಗ್ ನ ವೇದಿಕೆಗೆ ಅನೇಕ ತಂತ್ರಜ್ಞಾನಗಳನ್ನು ಕೊಡುಗೆಯಾಗಿ ನೀಡಿರುವುದೇ ಇದಕ್ಕೆ ಕಾರಣ.

ಸಿಸ್ಕೋ ಅನೇಕ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಲ್ಲಿ ಖುದ್ದಾಗಿ ಭಾಗಿಯಾಗುತ್ತಿರುವುದಾಗಿಯೂ ಲ್ಯೂಟಕರ್ ಹೇಳಿದ್ದಾರೆ. ಸಧ್ಯಕ್ಕೆ ಸಿಸ್ಕೋದ ಕಣ್ಣು ರಾಕ್‌ಸ್ಪೇಸ್ ಮತ್ತು ನಾಸದ ಸಹಭಾಗಿತ್ವದಲ್ಲಿ ನೆಡೆದಿರುವ ಓಪನ್ ಸ್ಟ್ಯಾಕ್ ತಂತ್ರಜ್ಞಾನ. ಓಪನ್ ಸ್ಟ್ಯಾಕ್ ೩೫ ಟೆಕ್ನಾಲಜಿ ವೆಂಡರುಗಳ ಸಹಭಾಗಿತ್ವದಲ್ಲಿ ಹೊರಬರುತ್ತಿರುವ ಓಪನ್ ಸೋರ್ಸ್ ಕ್ಲೌಡ್ ನ ಒಂದು ಪ್ರಥಮ ಹೆಜ್ಜೆ.

ಮುಕ್ತ ಹಾಗೂ ಸ್ವತಂತ್ರ ಗ್ನು/ಲಿನಕ್ಸ್ ಹಂಚಿಕೆಯ ಮುಂದಾಳು ರೆಡ್ ಹ್ಯಾಟ್ ಸಿಸ್ಕೋದ ವರ್ಚುಯಲೈಸೇಶನ್ ತಂತ್ರಜ್ಞಾನದ ಪಾಲುದಾರನಾಗಿದೆ. ರೆಡ್ ಹ್ಯಾಟ್ ನ ಕೆ.ವಿ.ಎಮ್ ತಂತ್ರಜ್ಞಾನ ಸಿಸ್ಕೋದ ಯುನಿಫೈಡ್ ಕಂಪ್ಯೂಟಿಂಗ್ ಸಿಸ್ಟಂ ನ ಮೂಲ ಭಾಗವಾಗಿದೆ. ರೆಡ್ ಹ್ಯಾಟ್ ಈ ಸಹಭಾಗಿತ್ವಕ್ಕೆ ೨೦೦೯ ರಲ್ಲಿ ಸಹಿಹಾಕಿತ್ತು. ಈಗ ಸಿಸ್ಕೋದೊಡನೆ ಡೇಲ್ಟಾ ಕ್ಲೌಡ್ ಯೋಜನೆಗೆ ರೆಡ್ ಹ್ಯಾಟ್ ಕೈಜೋಡಿಸಿದೆ.

ಓಪನ್ ಸೋಸ್ರ್ ಯೋಜನೆಗಳನ್ನು ತಳುಕು ಮಾಡುವುದರ ಬದಲು ಮೇಲ್‌ಸ್ತರದ ಯೋಜನೆಗಳಲ್ಲಿ ಭಾಗಿಯಾಗಿ ಅವುಗಳನ್ನೇ ಸಿಸ್ಕೋದ ಯೋಜನೆಗಳಲ್ಲಿ ಉಪಯೋಗಿಸಲು ಇಷ್ಟ ಪಡುವುದಾಗಿಯೂ ಟಕರ್ ಹೇಳಿದ್ದಾರೆ.

ಜಿ-ಮೈಲ್ ಬಳಸುತ್ತಿದ್ದೀರಾ? ಎಚ್ಚರ!

ಫ್ರೀ-ಸಾಪ್ಚ್ಟೇರ್ ಫೌಂಡೇಶನ್ ತನ್ನ ೪೦೦೦೦ ಸಾವಿರ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬೆಂಬಲಿಗರಲ್ಲಿ ಶೇಕಡ ೫೦ ರಷ್ಟು ಮಂದಿ @gmail.com ಇ-ಮೈಲ್ ಐಡಿ ಬಳಸುವುದನ್ನು ಕಂಡು ಎಚ್ಚರಿಕೆಯ ಮಾತೊಂದನ್ನು ಆಡಿದೆ.

ಜಾವಾ ಸ್ಕ್ರಿಪ್ಟ್, ಇಂಟರ್ನೆಟ್‌ನ ವೆಬ್‌ಪೇಜ್‌ಗಳಲ್ಲಿ ಬಳಕೆದಾರರಿಗೆ ಬೇಕಾದ ಸಣ್ಣ ಪುಟ್ಟ ದೃಶ್ಯ ಸಂಬಂದೀ ಪ್ರಭಾವಗಳನ್ನು ಬ್ರೌಸರ್ ಮೂಲಕ ತೋರಿಸಿ ದೈನಂದಿನ ಕೆಲಸಗಳಿಗೆ ಸೂಕ್ತ ಎನಿಸಿಕೊಂಡಿದ್ದ ಒಂದು ತಂತ್ರಾಂಶ. ಇದನ್ನು ಇಂದು ಜಿ-ಮೈಲ್ ಇತ್ಯಾದಿ ಅಂತರ್ಜಾಲ ಸೇವೆಗಳ ಮೂಲಕ ನಮ್ಮ ಕಂಪ್ಯೂಟರಿನಲ್ಲಿ ಅತ್ಯಂತ ಬಲಿಷ್ಟ ಕಾರ್ಯಗಳನ್ನು ನೆಡೆಸಲು ಬಳಸಲಾಗುತ್ತಿದೆ. ಈ ತಂತ್ರಾಂಶಗಳು, ನಿಮ್ಮ ಕಂಪ್ಯೂಟರಿನಲ್ಲಿ ಕೆಲಸ ಮಾಡುವ ಇತರೆ ತಂತ್ರಾಂಶಗಳಂತೆಯೇ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಾಗಿರುವುದು ಮುಖ್ಯ. ಆದರೆ ಸಧ್ಯಕ್ಕೆ ಜಾವಾಸ್ಕ್ರಿಪ್ಟ್‌ಗೆ ಸಂಬಂದಪಟ್ಟ ಬಹುತೇಕ ಪ್ರೋಗ್ರಾಮ್‌ಗಳು ನಿಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಎಂದರೆ ‘ಪ್ರೋಗ್ರಾಮ್‌ಗಳನ್ನು ನೆಡೆಸುವ, ಅಭ್ಯಸಿಸುವ, ಬದಲಿಸುವ ಮತ್ತು ಇತರರೊಡನೆ ಅವನ್ನು ಹಂಚಿಕೊಳ್ಳುವ’ ಸವಲತ್ತುಗಳನ್ನು ಮಾನ್ಯಮಾಡುತ್ತಿಲ್ಲ. ಜೊತೆಗೆ ನಿಮ್ಮ ಕಂಪ್ಯೂಟರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಶಕ್ತಿ ಇವಕ್ಕೆ ಇದೆ. ಫ್ರೀ ಸಾಫ್ಟ್ವೇರ್ ಫೌಂಡೇಶನ್ ಬಳಕೆದಾರನ ಹಿಡಿತ ಅವನ ಕಂಪ್ಯೂಟರಿನ ಮೇಲಿಂದ ತಪ್ಪುವುದನ್ನು ತಡೆಯಲೆಂದೇ ಕಳೆದ ೨೫ ವರ್ಷಗಳಿಂದ ಕಾರ್ಯಗತವಾಗಿದೆ.

ಮುಕ್ತ ಹಾಗು ಸ್ವತಂತ್ರ ತಂತ್ರಾಂಶ ಬಳಕೆದಾರರು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿ-ಮೈಲ್ ಬಳಸುತ್ತಿರುವುದರಿಂದ, ಅವರಲ್ಲಿ ಖಾಸಗೀ ಮಾಲೀಕತ್ವದ ತಂತ್ರಾಂಶಗಳ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲು ಎಫ್.ಎಸ್.ಎಫ್ ಮುಂದಾಗಿದೆ. ಜೊತೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೂಡ ಯೋಜೆನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಸಧ್ಯಕ್ಕೆ ಘನಾತ್ಮಕವಾಗಿ ತತ್ತಕ್ಷಣದ ಕ್ರಮವಾಗಿ ಖಾಸಗಿ ತಂತ್ರಾಂಶಗಳನ್ನು ಬಳಸುವುದನ್ನು ನಿಲ್ಲಿಸಲು ಸೂಚಿಸಲಾಗುತ್ತಿದೆ. .

ಅನೇಕರು ಜಿ-ಮೈಲ್ ಬಳಸಲೇ ಬೇಡಿ ಎನ್ನುತ್ತಿದ್ದರೆ. ಕಾರಣ ಜಿ-ಮೈಲ್ ನಲ್ಲಿರುವ ನಿಮ್ಮ ವ್ಯಕ್ತಿಗತ ದತ್ತಾಂಶಗಳಿಗೆ ಮತ್ತು ನಿಮ್ಮ ವೈಯುಕ್ತಿಕ ಗೌಪ್ಯತೆ ನಿಮ್ಮ ಕೈನಲ್ಲಿಲ್ಲದೆ, ಗೂಗಲ್‌ನ ಪಾಲಾಗುವುದೇ ಆಗಿದೆ. ಇತ್ತೀಚಿನ ಸುದ್ದಿಯ ಪ್ರಕಾರ ಮಿಲಿಯಗಟ್ಟಲೆ ಜಿ-ಮೈಲ್ ಬಳಕೆದಾರರು ತಮ್ಮ ಇ-ಮೈಲ್ ಗಳನ್ನು ಕಳೆದುಕೊಂಡ ಸುದ್ದಿ ನಿಮಗೂ ತಿಳಿದಿರಬಹುದು. ಇದೇ ವಿಚಾರ ಇತರೆ ಖಾಸಗಿ ಇ-ಮೈಲ್ ಸೇವೆಗಳಿಗೂ ಅನ್ವಯಿಸುತ್ತದೆ. ನಿಮ್ಮ ಇ-ಮೈಲ್ ಸೇವೆ ಆಯ್ದುಕೊಳ್ಳುವಾಗ ನೀವು ಇದರ ಬಗ್ಗೆ ಸ್ವಲ್ಪವಾದರೂ ಯೋಚಿಸಿರಬಹುದು.

ಆದರೂ, ನೀವು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬೆಂಬಲಿಗರಾಗಿದ್ದು ಅಥವಾ ನಿಮ್ಮ ಗೆಳೆಯರು, ಮನೆಯ ಸದಸ್ಯರು ಇತ್ಯಾದಿ ಜಿ-ಮೈಲ್ ಬಳಸುತ್ತಿದ್ದರೆ, ಖಾಸಗಿ ಜಾವಸ್ಕ್ರಿಪ್ಟ್ ಬಳಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಬಳಸದಂತೆ ನೋಡಿಕೊಳ್ಳಲು ತಿಳುವಳಿಗೆ ನೀಡಿ.

ಕಾರ್ಯೋನ್ಮುಕರಾಗಿ!

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

ನೋವೆನಾ ಓಪನ್‌ಸೋರ್ಸ್ ಲ್ಯಾಪ್‌ಟಾಪ್

ಬನ್ನೀ ಸ್ಟುಡಿಯೋಸ್‌ನ ಬನ್ನೀ ಮತ್ತು ಕ್ಸಾಬ್ಸ್ ಮುಕ್ತ ಲ್ಯಾಪ್‌ಟಾಪ್ ಒಂದನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳಂತೆಯೇ, ಹಾರ್ಡ್‌ವೇರ್ ಅನ್ನೂ ಕೂಡ ತಯಾರಿಸಲು ಯಾರಿಗಾದರೂ ಸಾಧ್ಯವಾಗಬೇಕು ಎಂಬ ಉದ್ದೇಶ ಹೊಂದಿರುವ ಮುಕ್ತ ಯಂತ್ರಾಂಶ (ಓಪನ್ ಹಾರ್ಡ್ವೇರ್/Open Hardware) ಪ್ರಾಜೆಕ್ಟ್‌ಗಳಲ್ಲಿ...

read more

ಅರಿವಿನ ಅಲೆಗಳು

ಗ್ನು/ಲಿನಕ್ಸ್ ಹಾಗೂ ಇತರೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬಳಸುತ್ತಿರುವ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವ ಸದವಕಾಶ. ನಿಮ್ಮೆಲ್ಲರ ಅನುಭವಗಳನ್ನು ಈ ವರ್ಷದ ಸ್ವತಂತ್ರ ದಿನಾಚರಣೆಯ ಅಂಗವಾಗಿ ಮತ್ತಷ್ಟು ಜನರೊಡನೆ “ಅರಿವಿನ ಅಲೆಗಳು” ಹಂಚಿಕೊಳ್ಳುತ್ತದೆ.. ಇಂದೊಂದು ವಿನೂತನ ಸ್ವತಂತ್ರ...

read more