ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳ ಸುತ್ತ ಲಭ್ಯವಿರುವ ಅನೇಕ ಉದ್ಯೋಗಾವಕಾಶಗಳ ಬಗ್ಗೆ ರೆಡ್ಹ್ಯಾಟ್ನಲ್ಲಿ ಕನ್ನಡ ಸಂಬಂಧಿತ ಕೆಲಸಗಳನ್ನು ಮಾಡುತ್ತಿರುವ ಶಂಕರ್ ಪ್ರಸಾದ್, ಇನ್ಮುಂದೆ ಲಿನಕ್ಸಾಯಣದಲ್ಲಿ ನಮಗೆ ತಿಳಿಸಿಕೊಡಲಿದ್ದಾರೆ. ಕೇವಲ ಉಚಿತವಾಗಿ, ಮುಕ್ತವಾಗಿ ತಂತ್ರಾಂಶಗಳು, ತಂತ್ರಜ್ಞಾನಗಳನ್ನು ಈ ಸ್ವತಂತ್ರ ತಂತ್ರಾಂಶ ಚಳುವಳಿ ನಮಗೆ ಕೊಡದೆ, ಅದರ ಸುತ್ತ ಸೇವೆಯಾಧಾರಿತ ಬಿಲಿಯನ್ ಡಾಲರ್ ಉದ್ದಿಮೆಗಳನ್ನು ಕೊಟ್ಟಿರುವ ಮಾಹಿತಿ ಅನೇಕರಿಗೆ ಈಗಿನ್ನೂ ತಲುಪುತ್ತಿದೆ. ಬಿಲಿಯನ್ ಡಾಲರ್ ಉದ್ದಿಮೆ ನೆಡೆಸುತ್ತಿರುವ ರೆಡ್ಹ್ಯಾಟ್, ಸನ್ಮೈಕ್ರೋಸಿಸ್ಟಂ ಮತ್ತು ನಂತರದ ದಿನಗಳಲ್ಲಿ ಆರೆಕಲ್ಗೆ ಬಿಕರಿಯಾದ MySQL ಕಂಪೆನಿಗಳ ಮಾರಾಟದ ಸುದ್ದಿ ಇನ್ನೂ ಬಿಸಿಬಿಸಿಯಾಗಿಯೇ ಇದೆ. ಈ ಲೇಖನಗಳಲ್ಲಿ ನೀಡುವ ಮಾಹಿತಿ ನೀವು ಗ್ನು/ಲಿನಕ್ಸ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಸುತ್ತ ಇರುವ ಅನೇಕ ಉದ್ಯೋಗಾವಕಾಶಗಳನ್ನು ಆರಿಸಿಕೊಳ್ಳಲು ಸಹಾಯಕವಾಗಲಿದೆ.
ಮುಂದಿನ ದಿನಗಳಲ್ಲಿ ಈ ಕೆಳಗಿನ ಉದ್ಯೋಗಾವಕಾಶ ಸಂಬಂಧಿ ಲೇಖನಗಳನ್ನು ನೀವು ಲಿನಕ್ಸಾಯಣದಲ್ಲಿ ಓದಬಹುದು.
* ಟೆಕ್ನಿಶಿಯನ್ (ಲಿನಕ್ಸ್) ಕೆಲಸ
* ಗಣಕ ವ್ಯವಸ್ಥಾಪಕ (ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್)
* ಅನ್ವಯ (ಅಪ್ಲಿಕೇಶನ್) ಮತ್ತು ಜಾಲ (ವೆಬ್) ವಿಕಸನೆಗಾರ
* ಬೆಂಬಲ (ಸಪೋರ್ಟ್)
* ತರಬೇತಿ ಮತ್ತು ಬರವಣಿಗೆ
* ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ
* ಕ್ಲೌಡ್ ಕಂಪ್ಯೂಟಿಂಗ್
* ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)
ಶಂಕರ್ ಪ್ರಸಾದ್ ತಮ್ಮ ಉದ್ಯೋಗಾವಕಾಶ ಕುರಿತ ಲೇಖನಗಳ ಬಗ್ಗೆ ಹೀಗೆ ಹೇಳಿದ್ದಾರೆ:
ನೀವು ವಿದ್ಯಾರ್ಥಿಯಾಗಿದ್ದು, ಲಿನಕ್ಸ್ ಅನ್ನು ಹವ್ಯಾಸಕ್ಕಾಗಿ ಬಳಸುತ್ತಿದ್ದು ಮತ್ತು ನಿಮಗೆ ಉಚಿತ ಮತ್ತು ಮುಕ್ತ ತಂತ್ರಾಂಶಗಳತ್ತ (FOSS) ಒಲವಿದ್ದರೆ, ಈ ನಿಮ್ಮ ಹವ್ಯಾಸದಿಂದ ಉದ್ಯೋಗಾವಕಾಶಗಳು ದೊರೆಯುವಂತಿದ್ದರೆ ಎಷ್ಟು ಒಳ್ಳೆಯದಲ್ಲವೆ? ಇಂದಿನ ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಲಿನಕ್ಸ್ ಪ್ರಮಾಣಿತ (ಸರ್ಟಿಫೈಡ್) ವೃತ್ತಿಪರರಿಗೆ ಸಾಕಷ್ಟು ಬೇಡಿಕೆಗಳಿವೆ.
ಆಂಡ್ರಾಯ್ಡ್, ಕ್ಲೌಡ್ ಮತ್ತು ಬಿಗ್ ಡೇಟಾದಂತಹ ಹೊಸ ಕ್ಷೇತ್ರಗಳು ದಾಪುಗಾಲು ಹಾಕುವಿಕೆಯೂ ಸಹ ಈ ಬೇಡಿಕೆಯು ಇನ್ನಷ್ಟು ಹೆಚ್ಚಾಗಲು ಗಮನಾರ್ಹ ಪಾತ್ರ ವಹಿಸುತ್ತಿವೆ. ಈ ಲೇಖನಗಳಲ್ಲಿ ಲಿನಕ್ಸ್ ಮತ್ತು ಉಚಿತ ಹಾಗೂ ಮುಕ್ತ ತಂತ್ರಾಂಶಕ್ಕೆ (FOSS) ಸಂಬಂಧಿಸಿದಂತೆ ಯಾವ ರೀತಿಯಲ್ಲಿ ನಿಮ್ಮ ವೃತ್ತಿಬದುಕನ್ನು ಹೇಗೆ ರೂಪಿಸಿಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆಗಳು